ನವದೆಹಲಿ:ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದೆ. ಬುಧವಾರ ಡಾಲರ್ ಎದುರು ರೂಪಾಯಿ 2 ಪೈಸೆಯಷ್ಟು ಇಳಿದು 82.97 ಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ಅಮೆರಿಕನ್ ಕರೆನ್ಸಿಯ ಹೆಚ್ಚಳದಿಂದ ಭಾರತದ ರುಪೀಗೆ ಹಿನ್ನಡೆ ಉಂಟಾಗಿದೆ. ಆದಾಗ್ಯೂ, ದೇಶೀಯ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆ ಮುಂದುವರಿದಿದೆ.
ಇಂದಿನ ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 82.92 ನಲ್ಲಿ ವಹಿವಾಟು ಆರಂಭಿಸಿತು. ಬಳಿಕ ಅದು 82.89 ಗರಿಷ್ಠ 82.99 ರೂಪಾಯಿಗೆ ತಲುಪಿತು. ದಿನದಾಂತ್ಯಕ್ಕೆ ಅಮೆರಿಕರನ್ ಡಾಲರ್ ವಿರುದ್ಧ ರೂಪಾಯಿ 82.97 ರಲ್ಲಿ ಸ್ಥಿರವಾಯಿತು. ಮಂಗಳವಾರವಷ್ಟೇ 82.95 ರಲ್ಲಿದ್ದ ರೂಪಾಯಿ 2 ಪೈಸೆ ಮೌಲ್ಯ ಕಳೆದುಕೊಂಡಿತು.
ಡಾಲರ್ಗೆ ಹೆಚ್ಚುತ್ತಿರುವ ಬೇಡಿಕೆ, ಜಾಗತಿಕ ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತೀಯ ರೂಪಾಯಿ ಮೌಲ್ಯ ಬುಧವಾರ 2 ಪೈಸೆಯಷ್ಟು ಮಾತ್ರ ಕುಸಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟು ಇನ್ನಷ್ಟು ಕುಸಿತವನ್ನು ತಗ್ಗಿಸಿದೆ. ಅಮೆರಿಕನ್ ಫೆಡರೇಷನ್ ಈ ವರ್ಷ ಮತ್ತೊಮ್ಮೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯ ಮೇಲೆ ಡಾಲರ್ ಮೌಲ್ಯ ಹೆಚ್ಚುತ್ತಿದೆ ಎಂದು ಆರ್ಥಿಕ ವಿಶ್ಲೇಷಕ ಅನುಜ್ ಚೌಧರಿ ಹೇಳಿದರು.
ಅಮೆರಿಕಾದ ಡಾಲರ್ ಏರಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ಕಾರಣಕ್ಕಾಗಿ ರೂಪಾಯಿಯು ತುಸು ಋಣಾತ್ಮಕ ವಹಿವಾಟು ನಡೆಸಲಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಸವಾಲುಗಳು ರೂಪಾಯಿಯ ಮೇಲೆ ಪರಿಣಾಮ ಬೀರಲಿವೆ. ಆದರೆ, ದೇಶೀಯ ಮಾರುಕಟ್ಟೆಗಳ ಉತ್ತಮ ವಹಿವಾಟು ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಡಾಲರ್ ಮತ್ತು ಭಾರತೀಯ ರೂಪಾಯಿ ಸ್ಪಾಟ್ ಬೆಲೆಯು 82.70 ರಿಂದ 83.30 ರೂಪಾಯಿ ಮಧ್ಯೆ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ಚೌಧರಿ ಹೇಳಿದರು.