ಮುಂಬೈ :ಜುಲೈ 31ರಂದು ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 7 ಪೈಸೆ ಕುಸಿದು 82.25 ಕ್ಕೆ ತಲುಪಿದೆ. ಬಲವಾದ ಅಮೆರಿಕನ್ ಕರೆನ್ಸಿ ಮತ್ತು ದೇಶೀಯ ಇಕ್ವಿಟಿ ಮಾರುಕಟ್ಟೆಗಳಿಂದ ವಿದೇಶಿ ನಿಧಿಗಳ ಹೊರಹರಿವಿನ ಕಾರಣದಿಂದ ರೂಪಾಯಿ ಕುಸಿದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿದ್ದು, ಪ್ರತಿ ಬ್ಯಾರಲ್ಗೆ 84 ಡಾಲರ್ ಆಗಿದೆ. ಇದರಿಂದ ದೇಶೀಯ ಶೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದ್ದು, ಅದರ ಪರಿಣಾಮದಿಂದಲೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದೆ.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ (Interbank Foreign Exchange) ಕೇಂದ್ರದಲ್ಲಿ ಭಾರತೀಯ ರೂಪಾಯಿ 82.23ಕ್ಕೆ ಪ್ರಾರಂಭವಾಯಿತು. ನಂತರ ಅಮೇರಿಕನ್ ಡಾಲರ್ ವಿರುದ್ಧ 82.21 ರ ಗರಿಷ್ಠವನ್ನು ಮುಟ್ಟಿತು. ನಂತರ 82.25 ನಲ್ಲಿ ವಹಿವಾಟು ನಡೆಸಿ ತನ್ನ ಹಿಂದಿನ ಮುಕ್ತಾಯಕ್ಕಿಂತ 7 ಪೈಸೆಯ ಕುಸಿತವನ್ನು ದಾಖಲಿಸಿತು. ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 82.18ಕ್ಕೆ ಸ್ಥಿರವಾಗಿತ್ತು.
ತಜ್ಞರ ಪ್ರಕಾರ ಯುಎಸ್‌ನಿಂದ ಸಕಾರಾತ್ಮಕ ಸ್ಥೂಲ ಆರ್ಥಿಕ ಡೇಟಾ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢವಾದ ಭಾವನೆಯ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಡಾಲರ್‌ನಲ್ಲಿ ಉತ್ಸುಕತೆ ಹೊಂದಿದ್ದಾರೆ. ಏತನ್ಮಧ್ಯೆ, ಆರು ಕರೆನ್ಸಿಗಳ ಗುಂಪಿನ ವಿರುದ್ಧ ಡಾಲರ್ನ ಬಲವನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.14 ನಿಂದ 101.77 ಕ್ಕೆ ಏರಿತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.53% ಕಡಿಮೆಯಾಗಿ $ 84.54 ರಲ್ಲಿ ವ್ಯಾಪಾರ ನಡೆಸುತ್ತಿದೆ. ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ, 30-ಷೇರ್ ಬಿಎಸ್‌ಇ ಸೆನ್ಸೆಕ್ಸ್ 120.58 ಪಾಯಿಂಟ್ ಅಥವಾ 0.18% ನಷ್ಟು ಕಡಿಮೆಯಾಗಿ 66,039.62 ಕ್ಕೆ ವಹಿವಾಟು ನಡೆಸುತ್ತಿದೆ.
ವಿಶಾಲವಾದ ಎನ್‌ಎಸ್‌ಇ ನಿಫ್ಟಿ 34.50 ಪಾಯಿಂಟ್‌ಗಳು ಅಥವಾ 0.18% ರಷ್ಟು ಕುಸಿದು 19,611.55 ಕ್ಕೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಮಾರಾಟಗಾರರಾಗಿದ್ದಾರೆ. ವಿನಿಮಯ ಕೇಂದ್ರದ ಮಾಹಿತಿಯ ಪ್ರಕಾರ ಅವರು 1,023.91 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.
ಒಂದು ದೇಶದ ಕರೆನ್ಸಿಯ ವಿರುದ್ಧ ಮತ್ತೊಂದು ದೇಶದ ಕರೆನ್ಸಿಯ ಮೌಲ್ಯವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಕರೆನ್ಸಿಯ ಬೇಡಿಕೆ ಮತ್ತು ಪೂರೈಕೆಗಳು ಕರೆನ್ಸಿಯ ಮೌಲ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿವೆ. 1944 ರಲ್ಲಿ ಬ್ರಿಟನ್ ವುಡ್ ಒಪ್ಪಂದವನ್ನು ಅಂಗೀಕರಿಸಿದಾಗ ಭಾರತೀಯ ರೂಪಾಯಿ ಮತ್ತು ಡಾಲರ್ ಮೌಲ್ಯವನ್ನು ಗುರುತಿಸುವ ಇತಿಹಾಸ ಪ್ರಾರಂಭವಾಯಿತು. 1947 ರಲ್ಲಿ ಭಾರತೀಯ ರೂಪಾಯಿಯು ಡಾಲರ್‌ಗೆ ಸಮನಾಗಿತ್ತು. ಅಂದಿನಿಂದ, ಭಾರತೀಯ ರೂಪಾಯಿಯ ಮೌಲ್ಯ ಮಾತ್ರ ಕುಸಿಯುತ್ತಿದೆ. 1966 ರ ಆರ್ಥಿಕ ಬಿಕ್ಕಟ್ಟು ಮತ್ತು ನೋಟು ಅಮಾನ್ಯೀಕರಣ ಸೇರಿದಂತೆ ಹಲವು ಅಂಶಗಳಿಂದಾಗಿ ರೂಪಾಯಿ ಮೌಲ್ಯದಲ್ಲಿ ಈ ಕುಸಿತವಾಗಿದೆ.
ಇದನ್ನೂ ಓದಿ : Interest Rate: ಆ.8ರಿಂದ ಆರ್ಬಿಐ ಎಂಪಿಸಿ ಸಭೆ; ಬಡ್ಡಿದರ ಯಥಾಸ್ಥಿತಿ ನಿರೀಕ್ಷೆ