ನವದೆಹಲಿ : ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ (ಎಫ್ಎಒ) ಎಲ್ಲಾ ಅಕ್ಕಿ ಬೆಲೆ ಸೂಚ್ಯಂಕವು (All Rice Price Index) ತಿಂಗಳಲ್ಲಿ ಶೇಕಡಾ 2.8 ರಷ್ಟು ಹೆಚ್ಚಾಗಿ ಶೇ 19.7ಕ್ಕೆ ತಲುಪಿದೆ. ಸೆಪ್ಟೆಂಬರ್ 2011 ರ ನಂತರ ಆಲ್ ರೈಸ್ ಪ್ರೈಸ್ ಇಂಡೆಕ್ಸ್ನ ಅತ್ಯಧಿಕ ಮಟ್ಟ ಇದಾಗಿದೆ. ಜುಲೈ 20ರಂದು ಭಾರತವು ಸ್ಟೀಮ್ ಮಾಡದ ಭಾರತೀಯ ಅಕ್ಕಿಯ ರಫ್ತನ್ನು ನಿಷೇಧಿಸಿದ್ದರಿಂದ ಇತರ ಮಾದರಿಯ ಅಕ್ಕಿಯ ಬೆಲೆಗಳು ಹೆಚ್ಚಾಗಬಹುದು ಎಂಬ ನಿರೀಕ್ಷೆಯಿಂದ ಮತ್ತು ಈಗಾಗಲೇ ಕೆಟ್ಟ ಹವಾಮಾನದ ಕಾರಣದಿಂದ ಅಕ್ಕಿ ಇಳುವರಿ ಕಡಿಮೆಯಾಗಿರುವುದರಿಂದ ಜಾಗತಿಕವಾಗಿ ಅಕ್ಕಿ ಬೆಲೆಗಳು ಹೆಚ್ಚಾಗುತ್ತಿವೆ.
ಅಕ್ಕಿ ಬೆಲೆಗಳು ತೀರಾ ಏರಿಕೆ ಮಟ್ಟಕ್ಕೆ ತಲುಪುತ್ತಿರುವುದರಿಂದ ಜಾಗತಿಕವಾಗಿ ಬಹುದೊಡ್ಡ ಜನಸಂಖ್ಯೆಯ ಆಹಾರ ಭದ್ರತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅದರಲ್ಲೂ ತೀರಾ ಬಡವರು ಹಾಗೂ ತಮ್ಮ ಆದಾಯದ ಬಹುತೇಕ ಎಲ್ಲವನ್ನೂ ಆಹಾರ ಖರೀದಿಗೇ ಬಳಸುವವರ ಮೇಲೆ ಬಹಳ ದೊಡ್ಡ ಆಘಾತ ಉಂಟು ಮಾಡಲಿದೆ ಎಂದು ಎಫ್ಎಒ ಎಚ್ಚರಿಸಿದೆ.
ರಫ್ತು ನಿರ್ಬಂಧಗಳಿಂದ ಉತ್ಪಾದನೆ, ಬಳಕೆ ಮತ್ತು ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದು ಮತ್ತು ಈ ಪರಿಣಾಮಗಳು ಅನುಷ್ಠಾನದ ಅವಧಿಯನ್ನು ಮೀರಿ ಉಳಿಯುತ್ತವೆ ಮತ್ತು ಅನೇಕ ದೇಶಗಳಲ್ಲಿ ಆಹಾರ ಹಣದುಬ್ಬರವನ್ನು ಉಲ್ಬಣಗೊಳಿಸುವ ಅಪಾಯವಿದೆ ಎಂದು ಯುಎನ್ ಏಜೆನ್ಸಿ ಹೇಳಿದೆ. ಕಪ್ಪು ಸಮುದ್ರದ ಧಾನ್ಯ ಉಪಕ್ರಮದ ಅಂತ್ಯ (Black Sea Grain Initiative) ಮತ್ತು ಅಕ್ಕಿಯ ಮೇಲಿನ ಹೊಸ ವ್ಯಾಪಾರ ನಿರ್ಬಂಧಗಳಿಂದ ಜಾಗತಿಕ ಆಹಾರ ಸರಕುಗಳ ಬೆಲೆಗಳು ಜುಲೈನಲ್ಲಿ ಏರಿಕೆಯಾಗಿವೆ.