ಚೆನ್ನೈ:ದೇಶದಲ್ಲಿ ಹಣದುಬ್ಬರ, ಜಿಡಿಪಿ ಕುಸಿತ ಆರೋಪಗಳ ಮಧ್ಯೆಯೇ ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಹಾಗೂ ಹಣಕಾಸು ಕಂಪನಿ ಮೋರ್ಗಾನ್ ಸ್ಟಾನ್ಲಿ ಸಮಾಧಾನಕರ ವರದಿಯೊಂದನ್ನು ಭಿತ್ತರಿಸಿದೆ. ರೆಪೋ ದರದ ಮೇಲೆ ರಿಸರ್ವ್ ಬ್ಯಾಂಕ್ ಕ್ರಮದಿಂದಾಗಿ ಹಣದುಬ್ಬರ ಸ್ಥಿರವಾಗಿರಲಿದೆ. ಜೂನ್ ವೇಳೆಗೆ ತ್ರೈಮಾಸಿಕ ಹಣದುಬ್ಬರ ಶೇ.5 ಕ್ಕಿಂತ ಕಡಿಮೆ ಇರಬಹುದು. ಮುಂದಿನ ಹಣಕಾಸು ವರ್ಷದಲ್ಲಿ ಇದು 5.5 ಪ್ರತಿಶತ ಇರುವ ನಿರೀಕ್ಷೆ ಇದೆ ಎಂದು ಹೇಳಿದೆ.
ಇದು ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ರಿಲೀಫ್ ಸಿಗುವ ಶುಭ ಸುದ್ದಿಯನ್ನು ನೀಡಿದೆ ಎಂದೇ ಹೇಳಬಹುದು. ಮಾರ್ಗನ್ ಸ್ಟಾನ್ಲಿ ವರದಿಯ ಪ್ರಕಾರ, ರೆಪೋ ದರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉತ್ತಮ ಕ್ರಮಗಳನ್ನು ಸಾಧಿಸಿದೆ. ಇದರಿಂದಾಗಿ ಹಣದುಬ್ಬರವು ಶೇಕಡಾ 6 ಕ್ಕಿಂತ ಕಡಿಮೆ ಇರಲಿದೆ. 2023 ರ ಹಣಕಾಸು ವರ್ಷದಲ್ಲಿ ದರಗಳು ಸ್ಥಿರವಾಗಿರುತ್ತವೆ ಎಂದು ಅದು ತನ್ನ ವರದಿಯಲ್ಲಿ ಹೇಳಿದೆ.