ಬೆಂಗಳೂರು/ ಹೈದರಾಬಾದ್: ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾಫ್ಟವೇರ್ ಕಂಪನಿಗಳು ತೆಗೆದುಕೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳಿಂದ ಕ್ಯಾಂಪಸ್ ನೇಮಕಾತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಆಗಸ್ಟ್ 2021 ರಿಂದ ಫೆಬ್ರವರಿ 2022 ರವರೆಗೆ ನೇಮಕಾತಿ ಮಾಡಿಕೊಂಡ ಪ್ರಮುಖ ಕಂಪನಿಗಳು ಈಗ ನೇಮಕಾತಿಯನ್ನು ನಿಧಾನ ಮಾಡಿವೆ. ಕೆಲ ಕಂಪನಿಗಳು ಮಾರ್ಚ್ 2023 ರ ನಂತರ ಕರೆ ಮಾಡುವುದಾಗಿ ಹೇಳುತ್ತಿವೆ. ಇನ್ನು ಕೆಲವೆಡೆ ಕಾಲೇಜುಗಳ ಕ್ಯಾಂಪಸ್ ನೇಮಕಾತಿ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಕಂಪನಿಗಳು:ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಹಿಂಜರಿತದ ಭೀತಿಯಿಂದಾಗಿ ಐಟಿ ಕಂಪನಿಗಳು ಈಗಿನಿಂದಲೇ ನೇಮಕಾತಿಯಲ್ಲಿ ಎಚ್ಚರಿಕೆ ವಹಿಸುತ್ತಿವೆ. ಪ್ರಸ್ತುತ ಕ್ಯಾಂಪಸ್ ನೇಮಕಾತಿಯಲ್ಲಿ ಶೇ 25 ರಿಂದ ಶೇ 30ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲ ಮೂಲಗಳು ಹೇಳಿವೆ.
ಈ ಆರ್ಥಿಕ ಹಿಂಜರಿತ ಮುಂದಿನ ವರ್ಷ ಜುಲೈವರೆಗೆ ಇರಬಹುದು ಎಂದು ಐಟಿ ಕಂಪನಿಗಳು ಅಂದಾಜಿಸಿವೆ. ಕಳೆದ ವರ್ಷ ಕ್ಯಾಂಪಸ್ ನೇಮಕಾತಿಯಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳಲ್ಲಿ, ಏಪ್ರಿಲ್ ಮತ್ತು ಮೇನಲ್ಲಿ ಬಿ ಟೆಕ್ ತಾತ್ಕಾಲಿಕ ಪ್ರಮಾಣಪತ್ರಗಳನ್ನು ಪಡೆದ ಬಹುತೇಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಆರ್ಥಿಕ ಹಿಂಜರಿತದ ನಿರೀಕ್ಷೆಯಲ್ಲಿ ಕಂಪನಿಗಳು ನೇಮಕಾತಿ ಮಾಡಿಕೊಳ್ಳಲು ಹಿಂಜರಿಯುತ್ತಿವೆ.
ಸಾಫ್ಟ್‌ವೇರ್ ಕಂಪನಿಗಳು ಈಗ ಹಂತ ಹಂತವಾಗಿ ನೇಮಕ ಮಾಡಿಕೊಳ್ಳುತ್ತಿವೆ. ಮೊದಲು ಕಡಿಮೆ ಸಂಖ್ಯೆಯ ನೇಮಕಾತಿಗಳನ್ನು ಮಾಡಿ ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುವ ನೀತಿ ಅನುಸರಿಸಲಾಗುತ್ತಿದೆ. ಇಲ್ಲಿಯವರೆಗೆ ಬಹುತೇಕ ನೇಮಕಾತಿಗಳನ್ನು ಒಂದೇ ಬಾರಿಗೆ ಮಾಡಲಾಗುತ್ತಿತ್ತು. ಅಗತ್ಯ ಬಿದ್ದರೆ ಮತ್ತೆ ನೇಮಕಾತಿ ಮಾಡಲಾಗುತ್ತಿತ್ತು.