ನವದೆಹಲಿ :ಮುಂದಿನ ವಾರ ನಡೆಯಲಿರುವ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರಂತರ ರೆಪೊ ದರ ಹೆಚ್ಚಳ ಮಾಡುವ ಕ್ರಮವನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ ಸಂಶೋಧನಾ ವಿಭಾಗ ಹೇಳಿದೆ. ಏಪ್ರಿಲ್ನ ನೀತಿಯಲ್ಲಿ ರೆಪೊ ದರ ಏರಿಕೆಗೆ ಆರ್‌ಬಿಐ ವಿರಾಮ ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಏಪ್ರಿಲ್‌ನಲ್ಲಿ ರೆಪೊ ದರ ಏರಿಕೆ ನಿಲ್ಲಿಸಲು ಸಾಕಷ್ಟು ಕಾರಣಗಳಿವೆ. ಕೈಗೆಟುಕುವ ದರದ ವಸತಿ ಸಾಲ ಮಾರುಕಟ್ಟೆಯಲ್ಲಿ ನಿಧಾನಗತಿ ಮತ್ತು ಆರ್ಥಿಕ ಸ್ಥಿರತೆಯ ಕಾಳಜಿಗಳು ಈಗ ಕಾಣಿಸಿಕೊಳ್ಳುತ್ತಿವೆ ಎಂದು ಎಸ್ಬಿಐ ಸಂಶೋಧನಾ ವರದಿ ಹೇಳಿದೆ. ಎಂಪಿಸಿ ಸಭೆಗೆ ಮುನ್ನುಡಿ ಎಂದು ಈ ವರದಿಯನ್ನು ಹೆಸರಿಸಲಾಗಿದೆ.
ಆರ್‌ಬಿಐ ದರ ನಿಗದಿ ಮಾಡುವ ಎಂಪಿಸಿ ಸಭೆಯು ಏಪ್ರಿಲ್ 3 ರಿಂದ 5 ರ ನಡುವೆ ನಡೆಯಲಿದೆ. ಕಳೆದ ದಶಕದಲ್ಲಿ ಸರಾಸರಿ ಮೂಲ ಹಣದುಬ್ಬರವು ಶೇಕಡಾ 5.8 ರಷ್ಟಿದೆ ಮತ್ತು ಮೂಲ ಹಣದುಬ್ಬರವು ಭೌತಿಕವಾಗಿ 5.5 ಶೇಕಡಾ ಮತ್ತು ಅದಕ್ಕಿಂತ ಕಡಿಮೆಗೆ ಕುಸಿಯುವ ಸಾಧ್ಯತೆಯಿಲ್ಲ ಎಂಬುದನ್ನು ಗಮನಿಸಬಹುದು. ಕೋವಿಡ್ ಸಾಂಕ್ರಾಮಿಕ ನಂತರದ ಆರೋಗ್ಯ ಮತ್ತು ಶಿಕ್ಷಣದ ಮೇಲಿನ ವೆಚ್ಚದಲ್ಲಿ ಬದಲಾವಣೆಗಳು ಮತ್ತು ಇಂಧನ ಬೆಲೆಗಳು ಎತ್ತರದ ಮಟ್ಟದಲ್ಲಿ ಉಳಿಯುವ, ಸಾರಿಗೆ ಹಣದುಬ್ಬರದ ಅಂಶಗಳು ನಿರ್ಬಂಧವಾಗಿ ಕೆಲಸ ಮಾಡುತ್ತವೆ. ಈ ತರ್ಕದ ಮೂಲಕ ನೋಡಿದರೆ ಆವಾಗ ಆರ್‌ಬಿಐ ಮತ್ತೊಂದು ಸುತ್ತಿನ ದರ ಏರಿಕೆಗೆ ಮುಂದಾಗಬಹುದು ಎಂದು ವರದಿ ತಿಳಿಸಿದೆ.
ರೆಪೋ ದರ ಎಂಬುದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸರ್ಕಾರಿ ಭದ್ರತೆಗಳ ವಿರುದ್ಧ ಭಾರತದ ವಾಣಿಜ್ಯ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಗೆ ಹಣವನ್ನು ನೀಡುವ ದರವಾಗಿದೆ. ಪ್ರಸ್ತುತ ರೆಪೋ ದರ 6.50% ರಷ್ಟಿದೆ. ರೆಪೋ ದರದಲ್ಲಿನ ಬದಲಾವಣೆಗಳು ಮಾರುಕಟ್ಟೆಯಲ್ಲಿ ಹಣದ ಹರಿವಿನ ಮೇಲೆ ಪರಿಣಾಮ ಬೀರುತ್ತವೆ. ಆರ್‌ಬಿಐ ದರಗಳನ್ನು ಕಡಿತಗೊಳಿಸಿದಾಗ, ಹಣದ ಪೂರೈಕೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕತೆಯನ್ನು ವಿಸ್ತರಿಸುತ್ತದೆ. ದರಗಳು ಹೆಚ್ಚಿರುವಾಗ ಇದು ಆರ್ಥಿಕ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ.