ನವದೆಹಲಿ:ವಿತ್ತೀಯ ನೀತಿ ಸಮಿತಿಯು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಈಗಿರುವ ಶೇ 6.5ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು. ದ್ವೈಮಾಸಿಕ ಹಣಕಾಸು ನೀತಿ ಬಗ್ಗೆ ಮಾಹಿತಿ ನೀಡಿದ ಅವರು, ದೇಶದ ಆರ್ಥಿಕತೆಯು ಉತ್ತಮ ವೇಗದಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ನಮ್ಮದು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಜಾಗತಿಕ ಬೆಳವಣಿಗೆಗೆ ಸುಮಾರು 15% ಕೊಡುಗೆ ನೀಡಿದೆ ಎಂದು ದಾಸ್ ತಿಳಿಸಿದರು.
ಗ್ರಾಹಕರ ಮೇಲೆ ಇಲ್ಲ ಹೆಚ್ಚುವರಿ ಬಡ್ಡಿಯ ಹೊರೆ:ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಗ್ರಾಹಕರ ಮೇಲೆ EMI ಯ ಹೆಚ್ಚುವರಿ ಹೊರೆ ಇರುವುದಿಲ್ಲ. ಈ ವರ್ಷದ ಫೆಬ್ರವರಿಯಿಂದ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯಲ್ಲಿ ರೆಪೋ ದರವನ್ನು ಹೆಚ್ಚಿಸಿಲ್ಲ. ಕಳೆದ ವರ್ಷ, ಮೇ 2022 ರಿಂದ, ರೆಪೋ ದರವನ್ನು ಸತತವಾಗಿ ಒಂಬತ್ತು ಬಾರಿ ಹೆಚ್ಚಳ ಮಾಡಲಾಗಿತ್ತು.
’’ನಮ್ಮ ಆರ್ಥಿಕತೆಯು ಸಮಂಜಸವಾದ ವೇಗದಲ್ಲಿ ಬೆಳೆಯುತ್ತಿದೆ ಮತ್ತು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಜಾಗತಿಕ ಬೆಳವಣಿಗೆಗೆ ಸುಮಾರು ಶೇ 15ರಷ್ಟು ಕೊಡುಗೆ ನೀಡಿದೆ. ಪ್ರಸಕ್ತ ಹಣಕಾಸು ವರ್ಷ 2023-24ನೇ ಸಾಲಿನ ಹಣದುಬ್ಬರ ಮುನ್ಸೂಚನೆಯನ್ನು ಶೇಕಡಾ 5.4 ಕ್ಕೆ ಹೆಚ್ಚಿಸಲಾಗಿದೆ‘‘ ಎಂದು ಆರ್ಬಿಐ ಗವರ್ನರ್ ತಿಳಿಸಿದ್ದಾರೆ.