ಮುಂಬೈ, ಮಹಾರಾಷ್ಟ್ರ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಈ ಬಾರಿಯೂ ಕೂಡ ರೆಪೋ ದರ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತವಾಗಿ 11ನೇ ಬಾರಿಗೆ ಇಂತಹ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಂಡಿದೆ. ರೆಪೋ ದರ ಈಗ ಶೇ.ರ4ರಷ್ಟಿದೆ. ಯಥಾಸ್ಥಿತಿಯನ್ನು ಕಾಪಾಡಲು ಹಣಕಾಸು ನೀತಿ ಸಮಿತಿ (ಎಂಪಿಸಿ) ನಿರ್ಧಾರ ಮಾಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು 'ರೆಪೋ ದರ' ಎನ್ನುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಬಳಸುವ ಮಾರ್ಗ ಇದಾಗಿದೆ. ರೆಪೋ ದರ ಕಡಿಮೆ ಇದ್ದರೆ, ಅಂದರೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದರೆ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುತ್ತದೆ. ಗ್ರಾಹಕರಿಗೂ ಹೆಚ್ಚಿನ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಸಾಧ್ಯವಾಗುತ್ತದೆ. ಈಗ ರೆಪೋ ದರ ಶೇಕಡಾ 4ರಷ್ಟಿದೆ.
ಕೇವಲ ಬ್ಯಾಂಕ್‌ಗಳು ಮಾತ್ರವಲ್ಲ. ಆರ್‌ಬಿಐ ಕೂಡ ವಾಣಿಜ್ಯ ಬ್ಯಾಂಕುಗಳಿಂದ ಅವಶ್ಯಕತೆಗೆ ತಕ್ಕಂತೆ ಸಾಲವನ್ನು ತೆಗೆದುಕೊಳ್ಳುತ್ತದೆ. ಈ ವೇಳೆ ತೆಗೆದುಕೊಂಡ ಸಾಲಕ್ಕೆ ಬಡ್ಡಿ ದರವನ್ನು ನಿಗದಿಪಡಿಸುವ ಅಧಿಕಾರವೂ ಆರ್ಬಿಐಗೆ ಇರುತ್ತದೆ. ಇದನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಈ ರಿವರ್ಸ್ ರೆಪೋ ದರದಲ್ಲಿಯೂ ಕೂಡ ಈ ಬಾರಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಈಗ ಪ್ರಸ್ತುತ ರಿವರ್ಸ್ ರೆಪೋ ದರವು ಶೇ.3.35ರಷ್ಟಿದೆ.