ಹೈದರಾಬಾದ್ : ಕಾರ್ಡ್‌ಗಳ ಬಳಕೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾರ್ಡ್‌ದಾರರ ಹಕ್ಕುಗಳನ್ನು ರಕ್ಷಿಸಲು ಆರ್‌ಬಿಐ ನಿರಂತರವಾಗಿ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಇತ್ತೀಚೆಗೆ ಕೆಲವು ಬದಲಾವಣೆಗಳನ್ನು ತಂದಿದ್ದು, ಜೂನ್ 1ರಿಂದ ಅವುಗಳು ಜಾರಿಗೆ ಬಂದಿವೆ. RBI ತಂದಿರುವ ಹೊಸ ನಿಯಮಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಮತ್ತು NBFCಗಳ ಜೊತೆಗೆ ಕಾರ್ಡುದಾರರಿಗೂ ಕೆಲವೊಂದು ಹೊಣೆಗಾರಿಕೆಗಳನ್ನು ಜಾರಿಗೊಳಿಸಿದ್ದು, ಕಾರ್ಡ್ ನಿರ್ವಹಣೆಯಲ್ಲಿನ ದೋಷಗಳಿಗೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವ ಬ್ಯಾಂಕ್‌ಗಳು ಹೊಣೆ ಆಗಿರುತ್ತವೆ ಎಂದು ತಿಳಿಸಿದೆ.
ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ :ಕಾರ್ಡ್ ಪ್ರಕಾರಗಳನ್ನು ಬದಲಾಯಿಸುವ, ಖರ್ಚು ಮಾಡಲು ಅನುಮತಿಸಲಾದ ಮೊತ್ತವನ್ನು ಹೆಚ್ಚಿಸುವ ಮತ್ತು ಇತ್ಯಾದಿ ಮೂಲಕ ಕ್ರೆಡಿಟ್ ಸ್ಕೋರ್, ಆದಾಯ, ಸಕಾಲಿಕ ಪಾವತಿಗಳು ಇತ್ಯಾದಿಗಳ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚಿಸುವುದಾಗಿ ಬ್ಯಾಂಕ್‌ಗಳು ಹೇಳುತ್ತವೆ. ಆದರೆ ಇಲ್ಲಿಯವರೆಗೆ ಈ ನಿರ್ಧಾರವನ್ನು ಬ್ಯಾಂಕ್‌ಗಳು ತಾವಾಗಿಯೇ ತೆಗೆದುಕೊಂಡು ಕಾರ್ಡ್‌ದಾರರಿಗೆ ನಂತರ ಕಾರ್ಡುದಾರರಿಗೆ ಮಾಹಿತಿ ನೀಡುತ್ತಿದ್ದವು. ಕೆಲವೊಮ್ಮೆ ಬ್ಯಾಂಕ್‌ಗಳು ಮನಬಂದಂತೆ ಕಾರ್ಡ್ಗಳನ್ನೂ ಕಳುಹಿಸುತ್ತಿದ್ದ ಉದಾಹರಣೆಗಳಿವೆ.
ಆದರೆ ಇನ್ನು ಮುಂದೆ ಇಂತಹ ಕಾರ್ಡ್‌ಗಳನ್ನು ನೀಡಲು ಬ್ಯಾಂಕ್‌ಗಳು ಕಾರ್ಡುದಾರರ ಅನುಮತಿ ಪಡೆಯಬೇಕು. ಕಾರ್ಡುದಾರರಿಗೆ ತಿಳಿಯದೆ ಮಿತಿಯನ್ನು ಹೆಚ್ಚಿಸಿ ಅದರ ಮೇಲೆ ಶುಲ್ಕ ವಿಧಿಸುವ ಅವಕಾಶ ಬ್ಯಾಂಕ್ಗಳಿಗಿರುವುದಿಲ್ಲ. ಒಂದು ವೇಳೆ ಮೊತ್ತ ಮರುಪಾವತಿ ಮಾಡುವುದರ ಜೊತೆಗೆ ಶುಲ್ಕ ವಿಧಿಸಿದರೆ, ಬ್ಯಾಂಕ್‌ಗಳು ಕಾರ್ಡ್‌ದಾರರಿಗೆ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇದು ಕಾರ್ಡ್ ಲೋನ್ಗಳಿಗೂ ಅನ್ವಯಿಸುತ್ತದೆ. ಇಂತಹ ಸನ್ನಿವೇಶಗಳು ಸಂಭವಿಸಿದಲ್ಲಿ ಗ್ರಾಹಕರು ಆರ್‌ಬಿಐ ಒಂಬುಡ್ಸ್‌ಮನ್ ಅನ್ನು ಸಂಪರ್ಕಿಸುವ ಅವಕಾಶವೂ ಇಲ್ಲಿದೆ.
ಕನಿಷ್ಠ ಪಾವತಿಯ ಅರಿವು : ಹೆಚ್ಚಿನ ಜನರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪೂರ್ಣವಾಗಿ ಪಾವತಿಸುವ ಬದಲು, ಸಾಮಾನ್ಯವಾಗಿ ಕಾರ್ಡ್ ಬ್ಯಾಲೆನ್ಸ್ನ ಶೇ. ಐದರವರೆಗೆ ಇರುವ ಕನಿಷ್ಠ ಬಾಕಿಯನ್ನಷ್ಟೇ ಪಾವತಿಸುತ್ತಾರೆ. ಈ ರೀತಿ ಕನಿಷ್ಠ ಮೊತ್ತವನ್ನಷ್ಟೇ ಪಾವತಿಸುವುದರಿಂದ ಹೆಚ್ಚಿನ ಬಡ್ಡಿಯ ಹೊರೆಯನ್ನು ಹೊರಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ಕಾರ್ಡ್ ವಿತರಕರು ಗ್ರಾಹಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆರ್‌ಬಿಐ ಸೂಚಿಸಿದೆ.
ಪ್ರತಿ ತಿಂಗಳು ಕನಿಷ್ಠ ಮೊತ್ತವನ್ನು ಪಾವತಿಸುವುದರಿಂದ ಬಾಕಿ ಇರುವ ಮೊತ್ತವನ್ನು ಪಾವತಿಸಲು ಕೆಲವು ವರ್ಷಗಳನ್ನು ಬೇಕಾಗುತ್ತದೆ ಎಂಬುದನ್ನು ಬ್ಯಾಂಕ್‌ಗಳು ಬಿಲ್‌ನಲ್ಲಿ ಸ್ಪಷ್ಟವಾಗಿ ಹೇಳಬೇಕು. ಈ ರೀತಿ ಹೇಳುವುದರಿಂದ ಗ್ರಾಹಕರು ತಮ್ಮ ಬಾಕಿ ಇರುವ ಮೊತ್ತವನ್ನು ತ್ವರಿತವಾಗಿ ಪಾವತಿಸುವಂತೆ ಪ್ರೇರೇಪಿಸಿ, ಅವರನ್ನು ಬಡ್ಡಿಯ ಹೊರೆಯಿಂದ ತಪ್ಪಿಸುವಂತೆ ಮಾಡುತ್ತದೆ ಎಂಬುದು ಆರ್‌ಬಿಐ ಅಭಿಪ್ರಾಯ.