ಅಹಮದಾಬಾದ್(ಗುಜರಾತ್): ಮಹಾಮಾರಿ ಕೊರೊನಾ ವೈರಸ್ ಸಾಂಕ್ರಾಮಿಕ ಸೋಂಕಿನಿಂದ ಹೊರಬಂದಿರುವ ಭಾರತ ಇದೀಗ ಹಿಂದಿನ ಲಯಕ್ಕೆ ಮರಳಿದೆ. ಹೀಗಾಗಿ, ಎಲ್ಲ ರಾಜ್ಯಗಳಲ್ಲೂ ಪ್ರವಾಸೋದ್ಯಮ ಚಟುವಟಿಕೆಗಳು ಪುನಾರಂಭಗೊಂಡಿದೆ. ಗುಜರಾತ್‌ನ ಅಹಮದಾಬಾದ್ನಲ್ಲಿ ಅತಿದೊಡ್ಡ ಟ್ರಾವೆಲ್ಸ್ ಆ್ಯಂಡ್ ಟೂರಿಸಂ ಪ್ರದರ್ಶನ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್ ಗಮನ ಸೆಳೆದಿದೆ.
ಸೆಪ್ಟೆಂಬರ್ 6 ರಿಂದ 8ರವರೆಗೆ ಅಂದರೆ ಮೂರು ದಿನಗಳ ಕಾಲ ಈ ಮೇಳ ನಡೆಯಲಿದೆ. ಇದರಲ್ಲಿ ಪ್ರತಿವೊಂದು ರಾಜ್ಯವೂ ತನ್ನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುತ್ತದೆ. ಇದರಲ್ಲಿ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್ ಕೂಡ ಇದ್ದು, ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಗಮನ ಸೆಳೆದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾ, ಚಿತ್ರೀಕರಣದ ವಿಧಾನದ ಬಗ್ಗೆಯೂ ಸ್ಟಾಲ್ನಲ್ಲಿ ಮಾಹಿತಿ ನೀಡಲಾಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿ ಹೈದರಾಬಾದ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಪ್ರತಿ ವರ್ಷ ಸುಮಾರು 2 ಲಕ್ಷ ಪ್ರವಾಸಿಗರು ಫಿಲ್ಮ್ ಸಿಟಿಗೆ ಭೇಟಿ ನೀಡುತ್ತಾರೆ. ಪ್ರತಿ ವರ್ಷ 100ಕ್ಕೂ ಹೆಚ್ಚು ಮದುವೆ ಕಾರ್ಯಕ್ರಮ ನಡೆಯುತ್ತವೆ.
ಇದನ್ನೂ ಓದಿ:ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಮೋಜಿ ಫಿಲಂ ಸಿಟಿ ಜೊತೆ ಭಾರತೀಯ ರೈಲ್ವೆ ಮಹತ್ವದ ಒಪ್ಪಂದ
ಅಷ್ಟೇ ಅಲ್ಲ, ಫಿಲ್ಮ್ ಸಿಟಿಯಲ್ಲಿ ಪ್ರತಿ ವರ್ಷ 400 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಚಲನಚಿತ್ರ ಚಿತ್ರೀಕರಣ ಮಾಡಲಾಗುತ್ತದೆ. ಹೈದರಾಬಾದ್ಗೆ ಹೋಗಿ ರಾಮೋಜಿ ಫಿಲ್ಮ್ ಸಿಟಿ ನೋಡದಿದ್ದರೆ ಏನನ್ನೂ ನೋಡಿಲ್ಲ ಎಂಬ ಮಾತೂ ಸಹ ಇದೆ. ಅಹಮದಾಬಾದ್‌ನ ಪ್ರವಾಸೋದ್ಯಮ ಮೇಳದಲ್ಲಿ ದೇಶ ಮತ್ತು ವಿದೇಶಗಳಿಂದ 700 ಕ್ಕೂ ಹೆಚ್ಚು ಸ್ಟಾಲ್ ಭಾಗಿಯಾಗಿದ್ದು, ಗುಜರಾತ್‌ನ ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ 2022 ರಲ್ಲಿ ಶೇ 10.2 ರಷ್ಟಿತ್ತು. ಕಳೆದ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದಾಗ ಇದು ಹೆಚ್ಚು ಎನ್ನಲಾಗ್ತಿದೆ.
ರಾಮೋಜಿ ಫಿಲ್ಮ್ ಸಿಟಿಯ ಜನರಲ್ ಮ್ಯಾನೇಜರ್ ತುಷಾರ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದು, "ಕೋವಿಡ್ ನಂತರ ಗುಜರಾತ್ನಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಇದರಲ್ಲಿ ನಾವು ಸಹ ಭಾಗಿಯಾಗಿದ್ದೇವೆ. ರಾಮೋಜಿ ಫಿಲ್ಮ್ ಸಿಟಿ ವಿಶ್ವದ ಅತಿದೊಡ್ಡ ಚಲನಚಿತ್ರ ನಗರವಾಗಿದೆ. 2000 ಎಕರೆಗಳಷ್ಟು ವಿಸ್ತಾರವಾಗಿರುವ ಈ ಫಿಲ್ಮ್ ಸಿಟಿಯು 550 ಕೊಠಡಿಗಳೊಂದಿಗೆ ಐದು ಹೋಟೆಲ್ ಹೊಂದಿದೆ" ಎಂದರು.