ನವದೆಹಲಿ : ಭಾರತದಲ್ಲಿ ಕ್ವಿಕ್ ಕಾಮರ್ಸ್ ವಲಯವು ಗಮನಾರ್ಹ ವಿಸ್ತರಣೆ ಕಾಣುತ್ತಿದ್ದು, ಡೆಲಿವರಿ ಬಾಯ್ ಜಾಬ್ಗಳಿಗೆ ಮತ್ತೆ ಬೇಡಿಕೆ ಸೃಷ್ಟಿಯಾಗಿದೆ. ಏಪ್ರಿಲ್ 2021 ರಿಂದ ಏಪ್ರಿಲ್ 2023ರ ಅವಧಿಯಲ್ಲಿ ಡೆಲಿವರಿ ಜಾಬ್ಗಳಿಗೆ ಶೇ 68ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಕಳೆದ ವರ್ಷದಲ್ಲಿ ಡೆಲಿವರಿ ಜಾಬ್ಗಳಿಗೆ ಶೇ 30ರಷ್ಟು ಹೆಚ್ಚು ಬೇಡಿಕೆ ಹೊಂದಿರುವ ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರುಗಳಲ್ಲಿ ಡೆಲಿವರಿ ಜಾಬ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಆಹಾರ, ದಿನಸಿ, ಚಿಲ್ಲರೆ ವ್ಯಾಪಾರ ಮತ್ತು ಆನ್‌ಲೈನ್ ಶಾಪಿಂಗ್‌ನಂತಹ ವಿಭಾಗಗಳಲ್ಲಿ ಆನ್ ಡಿಮ್ಯಾಂಡ್ ಸೇವೆಗಳಿಗೆ ಬೇಡಿಕೆ ಹೆಚ್ಚಾಗುವ ಪ್ರವೃತ್ತಿ ಮುಂದುವರಿಯಲಿದೆ. ಪೋರ್ಟಲ್‌ನಲ್ಲಿ ಡೆಲಿವರಿ ಜಾಬ್ ಪೋಸ್ಟಿಂಗ್‌ಗಳು ಅದೇ ಅವಧಿಯಲ್ಲಿ ಶೇಕಡಾ 17 ರಷ್ಟು ಹೆಚ್ಚಾಗಿದೆ.
ಐಪಿಎಲ್ನಂಥ ಪಂದ್ಯಾವಳಿಗಳು ಸೇರಿದಂತೆ ಟಿವಿಯಲ್ಲಿ ಇನ್ನೂ ಹಲವಾರು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿರುವ ಸಂದರ್ಭಗಳಲ್ಲಿ ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುವ ಟ್ರೆಂಡ್ ಹೆಚ್ಚಾಗಿರುವುದು ಕಂಡು ಬಂದಿದೆ. ಹೀಗಾಗಿ ಬಹುತೇಕ ಮಹಾನಗರಗಳಲ್ಲಿ ಆನ್‌ಲೈನ್ ಸರಕು ಡೆಲಿವರಿ ಉದ್ಯೋಗಿಗಳ ಬೇಡಿಕೆ ಹೆಚ್ಚಾಗುತ್ತಿದೆ. "ವೈಯಕ್ತಿಕ ಆದಾಯ ಹೆಚ್ಚಿಸಿಕೊಳ್ಳಲು ಭಾರತದಲ್ಲಿ ಜನರು ತಮ್ಮ ದಿನನಿತ್ಯದ ಉದ್ಯೋಗದ ಜೊತೆಗೆ ಡೆಲಿವರಿ ಜಾಬ್ಗಳನ್ನು ಸಹ ಮಾಡುತ್ತಿದ್ದಾರೆ" ಎಂದು ಇಂಡೀಡ್ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಶಶಿ ಕುಮಾರ್ ಹೇಳಿದರು.
ಇನ್ನು ಡೆಲಿವರಿ ಬಾಯ್ ಕೆಲಸ ಮಾಡಲು ಬಾಡಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬೈಕ್ಗಳು ಸುಲಭವಾಗಿ ಸಿಗುತ್ತಿರುವುದು ಈ ಕೆಲಸ ಮತ್ತೂ ಆಕರ್ಷಕವಾಗಲು ಕಾರಣವಾಗಿದೆ. ಈಗ ಬಾಡಿಗೆಗೆ ಬೈಕ್ ಸಿಗುತ್ತಿರುವುದರಿಂದ ಬೈಕರ್ ಆಗಲು ಬಯಸುವರಿಗೆ ವಾಹನ ಕೊಳ್ಳುವುದು ಅನಿವಾರ್ಯವಾಗಿಲ್ಲ. ಇದರಿಂದ ಇಎಂಐ ಕಟ್ಟುವುದು ಕೂಡ ತಪ್ಪಿದೆ.