ಉನ್ನತ ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಎಲ್ಲವೂ ಚೆನ್ನಾಗಿದ್ದಾಗ ಶೈಕ್ಷಣಿಕ ಸಾಲ ಮತ್ತು ಮುಂತಾದ ಆರ್ಥಿಕ ಮೂಲಗಳಿಂದ ಉನ್ನತ ಶಿಕ್ಷಣಕ್ಕೆ ಎದುರಾಗುವ ತೊಡಕುಗಳನ್ನು ನಿವಾರಿಸಿಕೊಳ್ಳಬಹುದು. ಇದರ ನಡುವೆ ಕುಟುಂಬದಲ್ಲಿ ಏನಾದರೂ ಅನಿರೀಕ್ಷಿತ ಘಟನಾವಳಿಗಳು ಸಂಭವಿಸಿದರೆ ಉದ್ದೇಶಿತ ಗುರಿಗೆ ಪೆಟ್ಟು ಬೀಳುವುದು ಖಂಡಿತ. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಸದಾ ಜಾಗರೂಕರಾಗಿರುವುದು ಇಂದಿನ ಅವಶ್ಯ. ಈ ನಿಟ್ಟಿನಲ್ಲಿ ಮಕ್ಕಳ ಭವಿಷ್ಯದ ಆರ್ಥಿಕ ಅಗತ್ಯಗಳಿಗೆ ಯಾವುದೇ ತೊಂದರೆಯಾಗದಂತೆ ವಿಮೆ ರಕ್ಷಣೆ ನೀಡಬೇಕು.
ಹೂಡಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಇದು ಅತ್ಯಗತ್ಯ. 15-20 ವರ್ಷಗಳ ನಂತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪಿಪಿಎಫ್, ಮ್ಯೂಚುವಲ್ ಫಂಡ್, ಷೇರುಗಳು, ರಿಯಲ್ ಎಸ್ಟೇಟ್, ಚಿನ್ನ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು. ಇವುಗಳ ಜೊತೆಗೆ ಮಾಡಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಜೀವ ವಿಮಾ ಪಾಲಿಸಿ ಆರಿಸಿಕೊಳ್ಳುವುದು.
ಮಕ್ಕಳ ಅಗತ್ಯಗಳಿಗಾಗಿ ನಿರ್ದಿಷ್ಟವಾಗಿ ಲಭ್ಯವಿರುವ ಪ್ಲಾನ್ಗಳು ಇವೆ. ಇವುಗಳನ್ನು ಪಾಲಕರು ಆಯ್ಕೆ ಮಾಡಬಹುದು. ಅನಿರೀಕ್ಷಿತ ಸಂದರ್ಭಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಒದಗಿಸುವ ಉದ್ದೇಶದಿಂದ ವಿಮಾ ಕಂಪನಿಗಳು ಈ ಪಾಲಿಸಿಗಳನ್ನು ನೀಡುತ್ತವೆ. ಇವು ಆರ್ಥಿಕವಾಗಿ ಕುಟುಂಬದ ಮುಖ್ಯಸ್ಥನ ಜವಾಬ್ದಾರಿ ತುಂಬಲು ನೆರವಾಗುತ್ತವೆ. ಸಾಮಾನ್ಯ ವಿಮಾ ಪಾಲಿಸಿಗಳಿಗೆ ಹೋಲಿಸಿದರೆ ಇವು ಸ್ವಲ್ಪ ಭಿನ್ನವಾಗಿವೆ ಎಂದು ಹೇಳಬಹುದು. ವಿಮಾದಾರರಿಗೆ ಏನಾದರೂ ಸಂಭವಿಸಿದಾಗ ಪಾಲಿಸಿಯು ತಕ್ಷಣವೇ ಮೊತ್ತ ಪಾವತಿಸುತ್ತದೆ. ಇದಾದ ನಂತರ ಪಾಲಿಸಿ ಅವಧಿಯ ಮುಕ್ತಾಯದ ಬಳಿಕ ವಿಮಾ ಮೌಲ್ಯವನ್ನು ಮತ್ತೆ ಪಾವತಿಸಲಾಗುತ್ತದೆ.
ಮಕ್ಕಳ ವಿಮಾ ಪಾಲಿಸಿಗಳ ಬಗ್ಗೆ ಹೇಳಬೇಕಾದ ಮುಖ್ಯ ವಿಷಯವೆಂದರೆ ಎರಡು ಪಟ್ಟು ಪರಿಹಾರವನ್ನು ಪಡೆಯುವುದು. ಪಾಲಿಸಿದಾರನಿಗೆ ಏನಾದರೂ ಉಂಟಾದಲ್ಲಿ ವಿಮೆದಾರರು ನಾಮಿನಿಗೆ ತಕ್ಷಣದ ಪರಿಹಾರವನ್ನು ಒದಗಿಸುತ್ತಾರೆ. ಅದರ ನಂತರ ವಿಮಾ ಕಂಪನಿಯು ಪಾಲಿಸಿದಾರರ ಪರವಾಗಿ ಪಾಲಿಸಿ ಅವಧಿ ಮುಗಿಯುವವರೆಗೆ ಪ್ರೀಮಿಯಂಗಳನ್ನು ಪಾವತಿಸುತ್ತದೆ. ಇದರರ್ಥ ಪಾಲಿಸಿ ಮುಂದುವರಿಯುತ್ತದೆ. ಅದರ ಅವಧಿ ಮುಗಿದ ತಕ್ಷಣ ಮತ್ತೊಮ್ಮೆ ನಾಮಿನಿಗೆ ಪಾಲಿಸಿ ಮೌಲ್ಯ ಪಾವತಿಯಾಗುತ್ತದೆ. ಇದು ಇಬ್ಬರು ಮಕ್ಕಳ ವಿವಿಧ ಹಂತಗಳಲ್ಲಿ ಅಗತ್ಯವಿರುವ ಹಣದ ಲಭ್ಯತೆಯನ್ನು ಖಚಿತಪಡಿಸುತ್ತದೆ. ಇದರಿಂದ ಉನ್ನತ ಶಿಕ್ಷಣ ಮತ್ತು ಮದುವೆ ಮತ್ತು ಇತರ ವೆಚ್ಚಗಳಿಗೆ ಅನುಕೂಲವಾಗುತ್ತದೆ.