ನವದೆಹಲಿ :ಮಾರ್ಚ್ 31, 2023 ರ ನಂತರ ಆರು ಅಂಕೆಗಳ ಆಲ್ಫಾನ್ಯೂಮರಿಕ್ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ (ಎಚ್‌ಯುಐಡಿ) ಇಲ್ಲದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಅಥವಾ ಚಿನ್ನದ ಕಲಾಕೃತಿಗಳನ್ನು ಮಾರಾಟ ಮಾಡುವುದನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ನಿಷೇಧಿಸಿದೆ. ವಂಚನೆಯಿಂದ ಗ್ರಾಹಕರನ್ನು ರಕ್ಷಿಸುವ ಮತ್ತು ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳ ಖರೀದಿಯಲ್ಲಿ ಅವರ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಶನಿವಾರ ಈ ಕ್ರಮ ಕೈಗೊಂಡಿದೆ. ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆಯು ಚಿನ್ನದ ಆಭರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗ್ರಾಹಕರು BID CARE ಆ್ಯಪ್ನಲ್ಲಿರುವ verify HUID ಆಪ್ಷನ್ ಬಳಸಿಕೊಂಡು ಎಚ್‌ಯುಐಡಿ ಸಂಖ್ಯೆಯೊಂದಿಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳನ್ನು ಪರಿಶೀಲಿಸಬಹುದು ಮತ್ತು ಪ್ರಮಾಣೀಕರಿಸಬಹುದು. ಆಭರಣವನ್ನು ಹಾಲ್‌ಮಾರ್ಕ್ ಮಾಡಿದ ಆಭರಣ ವ್ಯಾಪಾರಿ, ಅವರ ನೋಂದಣಿ ಸಂಖ್ಯೆ, ಆಭರಣದ ಶುದ್ಧತೆ, ಆಭರಣದ ಪ್ರಕಾರ ಮತ್ತು ಆಭರಣವನ್ನು ಪರೀಕ್ಷಿಸಿದ ಮತ್ತು ಹಾಲ್‌ಮಾರ್ಕ್ ಮಾಡಿದ ಹಾಲ್‌ಮಾರ್ಕಿಂಗ್ ಕೇಂದ್ರದ ವಿವರಗಳನ್ನು ಅಪ್ಲಿಕೇಶನ್ ಒದಗಿಸುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ಸಾಮಾನ್ಯ ಗ್ರಾಹಕರು ತಾವು ಖರೀದಿಸಿದ ಚಿನ್ನಾಭರಣದ ಶುದ್ಧತೆಯನ್ನು ಪರಿಶೀಲಿಸಬಹುದು.
ಹಳೆಯ ಯೋಜನೆಗಳ ಪ್ರಕಾರ ಗ್ರಾಹಕರು ಖರೀದಿಸಿರುವ ಹಾಲ್‌ಮಾರ್ಕ್ ಆಭರಣಗಳು ಮಾನ್ಯವಾಗಿರುತ್ತವೆ ಎಂದು ಸರ್ಕಾರ ಹೇಳಿದೆ. ಬಿಐಎಸ್ ನಿಯಮಗಳು, 2018 ರ ಸೆಕ್ಷನ್ 49 ರ ಪ್ರಕಾರ, ಗ್ರಾಹಕರು ಖರೀದಿಸಿದ ಹಾಲ್‌ಮಾರ್ಕ್ ಆಭರಣಗಳು ಆಭರಣದ ಮೇಲೆ ಗುರುತಿಸಲಾಗಿದ್ದಕ್ಕಿಂತ ಕಡಿಮೆ ಶುದ್ಧತೆ ಎಂದು ಕಂಡುಬಂದರೆ, ಖರೀದಿದಾರ ಅಥವಾ ಗ್ರಾಹಕರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ.