ಆದಾಯ ಮತ್ತು ಖರ್ಚು ಇವೆರಡರ ನಡುವೆ ಸಮತೋಲನ ಬೇಕೇ ಬೇಕು. ಇಂದಿನ ಅಗತ್ಯಗಳನ್ನು ಪೂರೈಸುವಾಗ, ಭವಿಷ್ಯದ ವೆಚ್ಚಗಳನ್ನು ಕೂಡಾ ಅಂದಾಜಿಸಬೇಕು. ಇದು ಪ್ರತಿಯೊಂದು ಬಜೆಟ್ನ ಮಾರ್ಗದರ್ಶಿ ತತ್ವ. ಈ ವಿಚಾರವು ಒಂದು ರಾಷ್ಟ್ರ ಅಥವಾ ವೈಯಕ್ತಿಕ ಕುಟುಂಬಕ್ಕೆ ಸಂಬಂಧಿಸಿರುತ್ತದೆ. ಫೆಬ್ರವರಿ 1ಕ್ಕೆ ಕೇಂದ್ರ ಹಣಕಾಸು ಸಚಿವರು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಮನೆಯ ಬಜೆಟ್ ಬಗ್ಗೆ ಒಂದಿಷ್ಟು ಮಹತ್ವದ ವಿಚಾರಗಳನ್ನು ತಿಳಿಯೋಣ.
ಕೇಂದ್ರ ಬಜೆಟ್ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರತಿಯೊಬ್ಬ ನಾಗರಿಕನ ಜೀವನದ ಮೇಲೂ ಪ್ರಭಾವ ಬೀರುತ್ತದೆ. ಅಭಿವೃದ್ಧಿ ಮತ್ತು ಕಲ್ಯಾಣದತ್ತ ಹೆಜ್ಜೆಗಳನ್ನಿರಿಸಲು ಸಾಮಾನ್ಯ ತತ್ವಗಳನ್ನು ಆಧರಿಸಿ ಬಜೆಟ್ ಸಿದ್ಧಪಡಿಸಲಾಗುತ್ತದೆ. ಮನೆ ಬಜೆಟ್ ಅನ್ನು ತಯಾರಿಸುವಾಗಲೂ ನಾವು ಈ ಮೂಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲಿಗೆ, ಒಟ್ಟಾರೆ ಕುಟುಂಬದ ಆರ್ಥಿಕ ಗುರಿಗಳನ್ನು ಯೋಚಿಸಬೇಕು. ಇದಕ್ಕೆ ಹೊಂದಿಸಿ ಮನೆಯ ಬಜೆಟ್ ಸಿದ್ಧಪಡಿಸಿಕೊಳ್ಳಬೇಕಿದೆ.
ಹೀಗಿರಲಿ ನಿಮ್ಮ ಮನೆ ಬಜೆಟ್:ನಿಮ್ಮ ಜೊತೆಗೊಂದು ಬಜೆಟ್ ಪುಸ್ತಕವಿರಲಿ. ಇದರಲ್ಲಿ ನಿಮ್ಮೆಲ್ಲ ಗುರಿಗಳನ್ನು ಬರೆಯಿರಿ. ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ಪ್ರತ್ಯೇಕವಾಗಿ ನಮೂದಿಸಿ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದು ಅಲ್ಪಾವಧಿಯ ಅವಶ್ಯಕತೆ ಅನ್ನೋದು ನಿಮಗೆ ತಿಳಿದಿರಲಿ. ಮನೆ ಹಾಗೂ ಕಾರ್ ಖರೀದಿಸುವುದು ಮಧ್ಯಮಾವಧಿಯ ಗುರಿಯಾಗುತ್ತದೆ. ನಿಮ್ಮ ನಿವೃತ್ತಿ, ನಿಮ್ಮ ಮಕ್ಕಳ ವಿವಾಹ ದೀರ್ಘಾವಧಿಯ ಯೋಜನೆಗಳಾಗಿವೆ. ಈ ವಿಷಯಗಳ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಮಾತ್ರ, ಮುಂದೆ ಏನು ಮಾಡಬೇಕೆಂದು ನಿಮಗೆ ತಿಳಿಯುತ್ತದೆ. ಗಳಿಸಿದ ಹಣವನ್ನು ವಿವಿಧ ಉದ್ದೇಶಗಳಿಗೆ ಯಾವ ರೀತಿ ಹೊಂದಿಸಬೇಕು, ಎಷ್ಟು ಬಳಸಬೇಕು ಎನ್ನುವುದು ತಿಳಿಯದೇ ಇರುವುದು ಹಲವು ಹಣಕಾಸಿನ ಸಮಸ್ಯೆಗಳಿಗೆ ಮುಖ್ಯ ಕಾರಣವಾಗುತ್ತದೆ.
ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಲಭ್ಯವಿರುವ ಹಣಕಾಸಿನ ಸಂಪನ್ಮೂಲಗಳನ್ನು ನೀವು ಎಷ್ಟು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮನೆಯ ಬಜೆಟ್ ನಿಮಗೆ ಹೆಚ್ಚು ಸಹಾಯ ಮಾಡುತ್ತದೆ. ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಉಳಿಸಿದರೆ ಸಾಕು ಎಂದು ಹಲವರು ಭಾವಿಸುತ್ತಾರೆ. ಅವರು ಅದನ್ನು ಉತ್ತಮ ಆರ್ಥಿಕ ಯೋಜನೆ ಎಂದೇ ಭಾವಿಸುತ್ತಾರೆ. ಇದು ವಾಸ್ತವವಾಗಿ ತಪ್ಪು. ನೀವು ಎಷ್ಟು ಉಳಿತಾಯ ಮಾಡುತ್ತಿದ್ದೀರಿ ಎನ್ನುವುದರ ಹೊರತಾಗಿ, ನಿಮ್ಮ ಹಣಕಾಸಿನ ಗುರಿಯನ್ನು ಸಾಕಾರಗೊಳಿಸಲು ನೀವು ಎಷ್ಟು ಹೂಡಿಕೆ ಮಾಡಬೇಕೆಂದು ನೀವು ತಿಳಿದಿರಬೇಕು. ಈ ಮೊತ್ತವನ್ನು ಹೂಡಿಕೆ ಮಾಡಲು ನೀವು ಎಚ್ಚರಿಕೆಯಿಂದ ಯೋಜನೆ ಸಿದ್ಧಪಡಿಸಬೇಕಾಗುತ್ತದೆ.
ಆಕಸ್ಮಿಕ ನಿಧಿಗೆ ಹೆಚ್ಚಿನ ಆದ್ಯತೆ ಕೊಡಿ:ಸಮಸ್ಯೆಗಳು ಯಾವಾಗ ಬರುತ್ತವೆಯೋ ಗೊತ್ತಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ಆಕಸ್ಮಿಕ ನಿಧಿಯನ್ನು ಹೊಂದಿರಲೇ ಬೇಕು. ನಿಮ್ಮ ಕುಟುಂಬದ ಬಜೆಟ್‌ನಲ್ಲಿ ಈ ವಿಚಾರಕ್ಕೆ ಹೆಚ್ಚಿನ ಆದ್ಯತೆ ಕೊಡಿ. ಕನಿಷ್ಠ 6 ತಿಂಗಳ ವೆಚ್ಚಗಳು ಮತ್ತು ಕಂತುಗಳಿಗೆ ನೀವು ಯಾವಾಗಲೂ ಸಾಕಷ್ಟು ಹಣವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನಿರುದ್ಯೋಗ, ಅಪಘಾತ ಇತ್ಯಾದಿ ಅನಿರೀಕ್ಷಿತ ಸಂದರ್ಭಗಳಲ್ಲಿ ಖರ್ಚುಗಳನ್ನು ಪೂರೈಸಲು ಮಾತ್ರ ಇದನ್ನು ಬಳಸಿ.