ಗಾಂಧಿನಗರ (ಗುಜರಾತ್):ಪ್ರಸಕ್ತ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 7.7 ರಷ್ಟು ಪ್ರಗತಿ ಕಂಡಿದೆ. ಇದಕ್ಕೆಲ್ಲಾ ಕಳೆದ 10 ವರ್ಷಗಳಲ್ಲಿ ಸರ್ಕಾರ ಕೈಗೊಂಡ ಮಹತ್ತರ ನಿರ್ಣಯಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಗಿಫ್ಟ್ ಸಿಟಿಯಲ್ಲಿ ಶನಿವಾರ ನಡೆದ ಇನ್ಫಿನಿಟಿ ಫೋರಂ 2.0 ಸಮಾವೇಶದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್ (ಗಿಫ್ಟ್) ಸಿಟಿಯನ್ನು ಹೊಸ ಯುಗದ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಬಯಸಿದೆ ಎಂದು ಹೇಳಿದರು.
ಜಿಡಿಪಿ ಅತ್ಯುತ್ತಮ ಪ್ರಗತಿ:ಕೇಂದ್ರ ಸರ್ಕಾರ ದೇಶದ ಆರ್ಥಿಕತೆ ಬಲಪಡಿಸಲು ಇನ್ನಿಲ್ಲದ ಶ್ರಮ ಹಾಕುತ್ತಿದೆ. ಇದರ ಪ್ರತಿಫಲವಾಗಿ ಕಳೆದ ಆರು ತಿಂಗಳಲ್ಲಿ ಶೇಕಡಾ 7.7 ಜಿಡಿಪಿ ದರವನ್ನು ದೇಶ ದಾಖಲಿಸಿದೆ. ಇದಕ್ಕೆ ಸರ್ಕಾರದ ಅತ್ಯುತ್ತಮ ನಿರ್ಧಾರಗಳು ಮತ್ತು ಹೂಡಿಕೆದಾರರು ದೇಶದ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. 10 ವರ್ಷಗಳಲ್ಲಿ ಜಾರಿಗೆ ತರಲಾದ ಸುಧಾರಣಾ ಕ್ರಮಗಳು ಕೂಡ ಇದರ ಪಾಲುದಾರಿಕೆ ಪಡೆಯುತ್ತವೆ ಎಂದು ಅವರು ಹೇಳಿದರು.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಗಿಫ್ಟ್ ಸಿಟಿಯು, ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (IFSC)ದ ಪ್ರಮುಖ ಅಂಗವಾಗಿ ಹೊರಹೊಮ್ಮುತ್ತಿದೆ ಎಂದರು. ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಸಿರು ಯೋಜನೆಯನ್ನು ಅಭಿವೃದ್ಧಿಪಡಿಸುವ ಕುರಿತು ತಮ್ಮ ಸಲಹೆಗಳನ್ನು ಹಂಚಿಕೊಳ್ಳಲು ತಜ್ಞರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯುನೆಸ್ಕೋದ 'ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿ'ಯಲ್ಲಿ ಗುಜರಾತಿನ ಸಾಂಪ್ರದಾಯಿಕ ನೃತ್ಯವಾದ ಗಾರ್ಬಾ ಸ್ಥಾನ ಪಡೆದಿದ್ದಕ್ಕಾಗಿ ಪ್ರಧಾನಿ ಮೋದಿ ರಾಜ್ಯದ ಜನರನ್ನು ಅಭಿನಂದಿಸಿದರು.
ಜಿಡಿಪಿ ದರದ ಅಂಕಿ - ಅಂಶ:ಪ್ರಸಕ್ತ ಹಣಕಾಸು ವರ್ಷದ ಜುಲೈ - ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ 7.6 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಸಾಂಖ್ಯಿಕ ಸಚಿವಾಲಯ ಈಚೆಗೆ ವರದಿ ಬಿಡುಗಡೆ ಮಾಡಿತ್ತು. ಮುಂಗಾರು ಮಳೆ ಕೈಕೊಟ್ಟು ಕೃಷಿ ವಲಯದ ಮೇಲೆ ಪರಿಣಾಮ ಉಂಟಾದರೂ, ಎರಡನೇ ತ್ರೈಮಾಸಿಕದ ಬೆಳವಣಿಗೆಯು ಮೊದಲ ತ್ರೈಮಾಸಿಕದ ಶೇಕಡಾ 7.8 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 2023-24ರ ಮೊದಲಾರ್ಧದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಈಗ ಶೇಕಡಾ 7.7 ರಷ್ಟಿದೆ ಎಂದು ಅಂಕಿ- ಅಂಶಗಳನ್ನು ನೀಡಿತ್ತು.
ಇದನ್ನೂ ಓದಿ:ಆರ್‌ಬಿಐನಿಂದ ಹಣಕಾಸು ನೀತಿ ಪ್ರಕಟ: ರೆಪೊ ದರದಲ್ಲಿ ಯಥಾಸ್ಥಿತಿ, ಜಿಡಿಪಿ ಬೆಳವಣಿಗೆ ಶೇ 7, ಹಣದುಬ್ಬರ ಶೇ 5.4 ಹೆಚ್ಚಳ