ಹೈದರಾಬಾದ್:ಮಾರ್ಚ್ನಲ್ಲಿ 2022-23ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲಿದೆ. ಇದು ತೆರಿಗೆ ಪಾವತಿಸುವ ಸಮಯವೂ ಹೌದು. ಸಹಜವಾಗೇ ಆದಾಯ ತೆರಿಗೆ ಪಾವತಿದಾರರು ತೆರಿಗೆ ಉಳಿತಾಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ತೆರಿಗೆ ಉಳಿಸಲು ಸೂಕ್ತವಾದ ಯೋಜನೆಗಳನ್ನು ಮಾಡುವುದು ಪ್ರತಿಯೊಬ್ಬ ಆದಾಯ ಗಳಿಸುವವರ ತಕ್ಷಣದ ಕಾಳಜಿಯೂ ಹೌದು.
ಅಂದಾಜು ತೆರಿಗೆ ಹೊರೆ ನಮಗೆ ತಿಳಿದಿರುವಂತೆ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆ ಇದೆ. ಹೂಡಿಕೆ ಮಾಡುವಾಗ ತೆರಿಗೆ ವಿನಾಯಿತಿ ಮಾತ್ರ ಉದ್ದೇಶವಾಗಿರಬಾರದು. ಭವಿಷ್ಯದಲ್ಲಿ ನಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಇದು ಹೆಚ್ಚುವರಿ ಪ್ರಯೋಜನಗಳನ್ನು ಸೃಷ್ಟಿಸಬೇಕು ಎಂಬುದೂ ಗಮನದಲ್ಲಿರಬೇಕು.
80 ಸಿ ಅಡಿ ನೀವು ಗರಿಷ್ಠ ಒಂದೂವರೆ ಲಕ್ಷ ಹೂಡಿಕೆಗಷ್ಟೇ ವಿನಾಯಿತಿ:ನಮ್ಮ ಸಂಪೂರ್ಣ ಹೆಚ್ಚುವರಿ ತೆರಿಗೆಯನ್ನು ಉಳಿತಾಯ ಯೋಜನೆಗಳಿಗೆ ತಿರುಗಿಸುವುದು ಅಷ್ಟೇನೂ ಪ್ರಯೋಜನಕಾರಿಯಲ್ಲ. ಉದಾಹರಣೆಗೆ ಹೂಡಿಕೆಗಾಗಿ ನಿಮ್ಮ ಬಳಿ 5 ಲಕ್ಷ ರೂ. ಇದೆ ಎಂದು ಇಟ್ಟುಕೊಂಡರೆ, ಇದನ್ನು ಸೆಕ್ಷನ್ 80 ಸಿ ಅಡಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ, ಈ ಸೆಕ್ಷನ್ ಅಡಿಯಲ್ಲಿ, ಗರಿಷ್ಠ 1,50,000 ರೂ.ಗಳ ಕಡಿತಕ್ಕೆ ಮಾತ್ರ ತೆರಿಗೆ ವಿನಾಯಿತಿ ಸಿಗಲಿದೆ. ಇನ್ನುಳಿದ ಅಮೌಂಟ್ಗೆ ತೆರಿಗೆ ಉಳಿತಾಯ ಆಗುವುದಿಲ್ಲ. ಹೂಡಿಕೆ ಮಾಡುವಾಗ ಈ ಅಂಶವನ್ನು ಪ್ರಮುಖವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು. ಕಳೆಯಬಹುದಾದ ಮಿತಿಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವುದು ಸೇರಿದಂತೆ ಬಹುವಿಧದ ಪ್ರಯೋಜನಗಳೊಂದಿಗೆ ಇತರ ಯೋಜನೆಗಳತ್ತ ಚಿತ್ತ ಹರಿಸುವುದು ಉತ್ತಮ.
ಸುರಕ್ಷಿತ ಪ್ಲಾನ್ಗಳಲ್ಲಿ ಹಣ ತೊಡಗಿಸಿ:ಉದ್ಯೋಗಿಗಳು ತಮ್ಮ ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ) ಬಗ್ಗೆ ಎಚ್ಚರಿಕೆಯಿಂದ ಯೋಜನೆ ರೂಪಿಸಬೇಕು. ಇದಕ್ಕಾಗಿ ನೀವು ಎಷ್ಟು ಪಾವತಿಸುತ್ತಿರುವಿರಿ ಎಂಬುದನ್ನು ಪರಿಶೀಲಿಸಿ ಮತ್ತು ನಂತರ ಅಗತ್ಯವಿರುವ ಮೊತ್ತವನ್ನು ತೆರಿಗೆ ಉಳಿತಾಯ ಯೋಜನೆಗಳಿಗೆ ವರ್ಗಾಯಿಸಿಕೊಳ್ಳಿ. ಇವುಗಳಲ್ಲಿ PPF, ELSS, ತೆರಿಗೆ ಉಳಿತಾಯ ಸ್ಥಿರ ಠೇವಣಿಗಳು, ಜೀವ ವಿಮಾ ಪ್ರೀಮಿಯಂ, ಹಿರಿಯ ನಾಗರಿಕ ಉಳಿತಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಸೇರಿವೆ. ಸೆಕ್ಷನ್ 80ಸಿ ಮಿತಿ 1,50,000 ರೂ.ಗಳನ್ನು ಇವುಗಳಲ್ಲಿ ಹೂಡಿಕೆ ಮಾಡಬಹುದು. ELSS ಹೊರತುಪಡಿಸಿ, ಉಳಿದೆಲ್ಲವೂ ಸುರಕ್ಷಿತ ಯೋಜನೆಗಳಾಗಿವೆ.