ನವದೆಹಲಿ: ಇಂದು ಕೂಡ ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಲಾಗಿದೆ. ಒಟ್ಟಾರೆಯಾಗಿ ಕಳೆದ 10 ದಿನಗಳಲ್ಲಿ ಲೀಟರ್ ತೈಲ ಬೆಲೆಯಲ್ಲಿ 6.40 ರೂಪಾಯಿ ಹೆಚ್ಚಳ ಮಾಡಿದಂತಾಗಿದೆ.
ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 101.81 ರೂಪಾಯಿ ಇದೆ. ನಿನ್ನೆ 101.01 ರೂಪಾಯಿ ಇತ್ತು. ಡೀಸೆಲ್ ಲೀಟರ್‌ಗೆ ರೂ.92.27 ರಿಂದ ರೂ.93.07 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 106.46 ರೂಪಾಯಿ ಇದ್ದರೆ ಡೀಸೆಲ್ 90.49 ರೂಪಾಯಿ ಇದೆ. ಕೋಲ್ಕತ್ತದಲ್ಲಿ ಪೆಟ್ರೋಲ್ 110.52 ರೂಪಾಯಿ, ಡೀಸೆಲ್ 95.42 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ 106.69 ರೂ., ಡೀಸೆಲ್ 96.76 ರೂ.ಇದೆ. ಮುಂಬೈನಲ್ಲಿ 84 ಪೈಸೆ ಏರಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 116.72 ರೂ. ಮತ್ತು 100.94 ರೂಪಾಯಿಗೆ ತಲುಪಿದೆ.
ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿರುವುದರಿಂದ ಸ್ಥಳೀಯ ತೆರಿಗೆಯ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೆಲೆಗಳಲ್ಲಿ ಬದಲಾವಣೆ ಇದೆ. ಮಾರ್ಚ್ 22 ರಿಂದ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಒಂಬತ್ತನೇ ಹೆಚ್ಚಳವಾಗಿದೆ.
ಉತ್ತರ ಪ್ರದೇಶ, ಪಂಜಾಬ್ ಸೇರಿ ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಅಂದರೆ ನವೆಂಬರ್ 4 ರಿಂದ ತೈಲ ಬೆಲೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿರಲಿಲ್ಲ. ಈ ಅವಧಿಯಲ್ಲಿ ಕಚ್ಚಾ ವಸ್ತುಗಳ (ಕಚ್ಚಾ ತೈಲ) ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 30 ರಷ್ಟು ಏರಿಕೆಯಾಗಿತ್ತು.
ಮಾರ್ಚ್ 10 ರಂದು ಮತ ಎಣಿಕೆಯ ನಂತರ ದರ ಪರಿಷ್ಕರಣೆ ನಿರೀಕ್ಷಿಸಲಾಗಿತ್ತು. ಆದರೆ, ಅದನ್ನು ಒಂದೆರಡು ವಾರಗಳವರೆಗೆ ಮುಂದೂಡಲಾಯಿತು. ಪ್ರತಿ ಬ್ಯಾರೆಲ್ ಕಚ್ಚಾ ತೈಲವು ಸುಮಾರು 82 ರಿಂದ 120 ಡಾಲರ್‌ಗೆ ಏರಿಕೆ ಯಾಗಿರುವುದರಿಂದ ದೇಶದಲ್ಲಿ 137 ದಿನಗಳ ಬಳಿಕ ಚಿಲ್ಲರೆ ತೈಲ ಬೆಲೆ ದೊಡ್ಡ ಮಟ್ಟದಲ್ಲಿ ಹೆಚ್ಚಳ ವಾಗುತ್ತಿದೆ.
ಇದನ್ನೂ ಓದಿ:9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?