ಹೈದರಾಬಾದ್:ಸಾಲ ಮಾಡಿಯಾದ್ರು ತುಪ್ಪ ತಿನ್ನು ಅನ್ನೋ ಮಾತಿದೆ. ಆದರೆ, ನಾವು ಪಡೆಯುವ ಸಾಲ ನಮ್ಮನ್ನೇ ಮುಳುಗಿಸುವಂತಿರಬಾರದು. ತುರ್ತು ಸಂದರ್ಭಗಳಲ್ಲಿ ಮಾತ್ರ ಸಾಲ ಪಡೆದುಕೊಳ್ಳಬೇಕು. ಈಗ ಹಲವಾರು ಖಾಸಗಿ ಸಂಸ್ಥೆಗಳು ಕೋಟಿಗಟ್ಟಲೆ ಸಾಲ ನೀಡಲು ತುದಿಗಾಲ ಮೇಲೆ ನಿಂತಿವೆ. ಆದರೆ, ಅದನ್ನು ಮರುಪಾವತಿ ಮಾಡುವ ಶಕ್ತ್ಯಾನುಸಾರ ಮಾತ್ರ ನಾವು ಸಾಲ ಪಡೆದುಕೊಳ್ಳಬೇಕು.
ಸಾಲಕ್ಕೆ ಸೂಕ್ತ ಕಾರಣ ಇರಲಿ:ವೈಯಕ್ತಿಕ ಸಾಲ ನೀಡಲು ಸಾಕಷ್ಟು ಬ್ಯಾಂಕೇತರ ಸಂಸ್ಥೆಗಳು ನಾ ಮುಂದು ತಾ ಮುಂದು ಎಂದು ಬರುತ್ತವೆ. ಕ್ಷಣಮಾತ್ರದಲ್ಲಿ ನಮ್ಮ ಖಾತೆಗೆ ಹಣ ಬಂದು ಬೀಳುತ್ತದೆ. ಸಾಲ ಪಡೆಯವ ಅಗತ್ಯವಿದೆಯೇ ಎಂಬುದನ್ನು ನಾವು ಮೊದಲು ದೃಢೀಕರಿಸಿಕೊಳ್ಳಬೇಕು. ಬಳಿಕ ಸಾಲ ನೀಡುವ ಸಂಸ್ಥೆಯ ಸಂಪೂರ್ಣ ವಿವರ ಪಡೆದು ಸಾಲದ ನಿಯಮಗಳನ್ನು ತಿಳಿದುಕೊಳ್ಳಬೇಕು.
ಬ್ಯಾಂಕೇತರ ಸಂಸ್ಥೆಗಳು ನಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ. ವೈಯಕ್ತಿಕ ಸಾಲದ ಅಗತ್ಯವಿದ್ದರೆ, ನಿಮ್ಮ ಅಗತ್ಯಗಳನ್ನು ಯಾವ ಸಂಸ್ಥೆಯು ಉತ್ತಮವಾಗಿ ಪೂರೈಸುತ್ತದೆ ಎಂಬುದನ್ನು ಮೊದಲು ನಿರ್ಧರಿಸಿ. ಬಡ್ಡಿ ದರದ ಬಗ್ಗೆ ಕೂಲಂಕಷವಾಗಿ ಅರಿಯಬೇಕು. ಈ ಎಲ್ಲಾ ವಿವರಗಳಿಗಾಗಿ ಸಂಬಂಧಪಟ್ಟ ಸಂಸ್ಥೆಯ ವೆಬ್‌ಸೈಟ್ ಅನ್ನು ಹುಡುಕಿ. ವಿವರಗಳನ್ನು ಪಡೆದುಕೊಂಡ ಬಳಿಕ ಎಲ್ಲ ಸಂಸ್ಥೆಗಳಿಗೆ ಏಕಕಾಲಕ್ಕೆ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ. ಇದು ನಿಮ್ಮ ಕ್ರೆಡಿಟ್ ಪಾಯಿಂಟ್ಸ್ಗೆ ಪೆಟ್ಟು ನೀಡೀತು ಜೋಕೆ.