ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ತನ್ನ ಪ್ಲೇ ಸ್ಟೋರ್ನ ಅಪ್ಲಿಕೇಶನ್‌ಗಳ ವೈಯಕ್ತಿಕ ಸಾಲ (ಪರ್ಸನಲ್ ಲೋನ್) ನೀತಿಯನ್ನು ಬದಲಾವಣೆ ಮಾಡುತ್ತಿದೆ. ಗೂಗಲ್ ಪ್ಲೇ ಸ್ಟೋರ್ನ ಹೊಸ ನಿಯಮದ ಪ್ರಕಾರ ಪರ್ಸನಲ್ ಲೋನ್ ನೀಡುವ ಆ್ಯಪ್ಗಳು ಸಾಲದ ಅರ್ಜಿಯ ಪ್ರಕ್ರಿಯೆ ಸಂದರ್ಭದಲ್ಲಿ ಇನ್ನು ಮುಂದೆ ಗ್ರಾಹಕರ ಕಾಂಟ್ಯಾಕ್ಟ್ ಡಿಟೇಲ್ಸ್ ಹಾಗೂ ಫೋಟೋಗಳನ್ನು ಪಡೆದುಕೊಳ್ಳುವಂತಿಲ್ಲ. ವೈಯಕ್ತಿಕ ಸಾಲಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ಬಳಕೆದಾರರ ಸಂಪರ್ಕಗಳು ಅಥವಾ ಫೋಟೋಗಳನ್ನು ಪಡೆಯಲಾಗದಂತೆ ನಾವು ನಮ್ಮ ವೈಯಕ್ತಿಕ ಸಾಲ ನೀತಿಯನ್ನು ನವೀಕರಿಸುತ್ತಿದ್ದೇವೆ ಎಂದು ಗೂಗಲ್ ಹೇಳಿದೆ.
ಫೋನ್ನಲ್ಲಿನ ಮೆಮೊರಿ ಸ್ಟೋರೆಜ್, ಫೋಟೋಗಳು, ವಿಡಿಯೋಗಳು, ಸಂಪರ್ಕ ಸಂಖ್ಯೆಗಳು, ನಿಖರವಾದ ಸ್ಥಳ ಮತ್ತು ಕಾಲ್ ಲಾಗ್‌ಗಳಿಗೆ ಪ್ರವೇಶವನ್ನು ತಡೆಯಲು Play Store ನಲ್ಲಿನ ಅಪ್ಲಿಕೇಶನ್‌ಗಳಿಗಾಗಿ ಗೂಗಲ್ ತನ್ನ ವೈಯಕ್ತಿಕ ಸಾಲ ನೀತಿಯಲ್ಲಿ ಬುಧವಾರ ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆಯು ಮೇ 31 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಭಾರತ, ಇಂಡೋನೇಷ್ಯಾ, ಫಿಲಿಪೈನ್ಸ್, ನೈಜೀರಿಯಾ, ಕೀನ್ಯಾ ಮತ್ತು ಪಾಕಿಸ್ತಾನದಲ್ಲಿ ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ನಿಯಮಗಳನ್ನು ಗೂಗಲ್ ಜಾರಿಗೆ ತಂದಿದೆ.
ಇನ್ನು ಮುಂದೆ ಭಾರತದಲ್ಲಿನ ಕಂಪನಿಗಳು ಪರ್ಸನಲ್ ಲೋನ್ ಆ್ಯಪ್ ಡಿಕ್ಲರೇಶನ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ ಮತ್ತು ತಮ್ಮ ಘೋಷಣೆಗೆ ಸಾಕ್ಷಿಯಾಗಿ ಅಗತ್ಯ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ಉದಾಹರಣೆಗೆ, ವೈಯಕ್ತಿಕ ಸಾಲಗಳನ್ನು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರವಾನಗಿ ಪಡೆದಿದ್ದರೆ ಅಂಥ ಪರವಾನಗಿಯ ಪ್ರತಿಯನ್ನು ಅವರು ಸಲ್ಲಿಸಬೇಕಾಗುತ್ತದೆ. ಗೂಗಲ್ ಈ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ.