ಬೆಂಗಳೂರು: ಜೀವನವು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ. ಭವಿಷ್ಯದಲ್ಲಿ ನಮಗೆ ಏನು ಕಾಯುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ವಿಶೇಷವಾಗಿ ವಾಹನ ಅಪಘಾತಗಳು ಯಾವಾಗ ಮತ್ತು ಯಾವ ರೂಪದಲ್ಲಿ ಸಂಭವಿಸುತ್ತವೆ ಎಂಬುದು ನಮಗೆ ತಿಳಿದಿರುವುದಿಲ್ಲ. ವಾಹನ ಅಪಘಾತ ಸಣ್ಣದಾಗಿದ್ದರೆ ನಾವು ಬೇಗನೆ ಚೇತರಿಸಿಕೊಂಡು ಮತ್ತೆ ನಮ್ಮ ಕೆಲಸಕಾರ್ಯಗಳಿಗೆ ಹಾಜರಾಗುತ್ತೇವೆ. ಆದರೆ ಒಂದೊಮ್ಮೆ ತೀವ್ರ ಸ್ವರೂಪದ ವಾಹನ ಅಪಘಾತದಲ್ಲಿ ನಾವು ಸಿಲುಕಿದರೆ, ವರ್ಷಗಟ್ಟಲೆ ನಮ್ಮ ಆದಾಯದ ಮೂಲಗಳು ನಿಂತು ಹೋಗಬಹುದು. ಅಪಘಾತದಲ್ಲಿ ಗಾಯಗೊಂಡು ತಿಂಗಳುಗಟ್ಟಲೆ ಮನೆಯಲ್ಲೇ ಇರುವ ಪರಿಸ್ಥಿತಿ ಎದುರಾಗಬಹುದು. ಈ ರೀತಿಯ ಘಟನೆಗಳು ಸಂಭವಿಸಿದಾಗ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳು ನಮಗೆ ಅಗತ್ಯವಾದ ಹಣಕಾಸಿನ ಬೆಂಬಲ ನೀಡುವ ಸಾಧನಗಳಾಗಿವೆ. ಹಾಗಾದರೆ ಅಪಘಾತ ವಿಮೆಯ ಅಗತ್ಯವೇನು, ಅಪಘಾತ ವಿಮಾ ಪಾಲಿಸಿ ಆಯ್ಕೆ ಮಾಡುವಾಗ ಯಾವೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ.
ಅನಾರೋಗ್ಯದ ಸಂದರ್ಭದಲ್ಲಿ ಆರೋಗ್ಯ ವಿಮೆಯು ಆಸ್ಪತ್ರೆ ವೆಚ್ಚವನ್ನು ಪಾವತಿಸುತ್ತದೆ. ಆದರೆ, ಅಪಘಾತ ಸಂಭವಿಸಿದಾಗ ತಾತ್ಕಾಲಿಕವಾಗಿ ಆದಾಯ ನಿಂತು ಹೋಗಬಹುದು. ಇನ್ನು ಕೆಲ ಬಾರಿ ಭಾಗಶಃ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾಗಬಹುದು. ಹೀಗಾದಾಗ ಇದು ದೀರ್ಘಾವಧಿಯ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಂಥ ಘಟನೆಗಳ ಸಂದರ್ಭದಲ್ಲಿ ನಿಮಗೆ ಆರ್ಥಿಕವಾಗಿ ಸಹಾಯ ಮಾಡಲು ವೈಯಕ್ತಿಕ ಅಪಘಾತ ವಿಮೆ (PAC) ಬೇಕಾಗುತ್ತದೆ. ಈ ಅಪಘಾತ ವಿಮಾ ಪಾಲಿಸಿಗೆ ಅನೇಕ ಆಡ್-ಆನ್‌ಗಳನ್ನು ಸೇರಿಸಬಹುದು. ಮುಖ್ಯವಾಗಿ ಆಕಸ್ಮಿಕ ಸಾವು, ತಾತ್ಕಾಲಿಕ/ಶಾಶ್ವತ ಅಂಗವೈಕಲ್ಯ ಮತ್ತು ಅರೆ-ಶಾಶ್ವತ ಅಂಗವೈಕಲ್ಯ ಮುಂತಾದ ಆ್ಯಡ್ ಆನ್‌ಗಳನ್ನು ಪಾಲಿಸಿಗೆ ಸೇರಿಸಬಹುದು. ಈ ಪೂರಕ ಪಾಲಿಸಿಗಳಿಗೆ ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಯಾರು ಅರ್ಹರು?
ವೈಯಕ್ತಿಕ ಅಪಘಾತ ವಿಮಾ ಪಾಲಿಸಿಯನ್ನು 5 ವರ್ಷದಿಂದ 70 ವರ್ಷ ವಯಸ್ಸಿನ ಜನರಿಗೆ ನೀಡಲಾಗುತ್ತದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಂತೆ, ವಯಸ್ಸಿಗೆ ಅನುಗುಣವಾಗಿ ಇದರಲ್ಲಿನ ಪ್ರೀಮಿಯಂ ಬದಲಾಗುವುದಿಲ್ಲ. ಎಲ್ಲಾ ವಯೋಮಾನದವರಿಗೂ ಒಂದೇ ಪ್ರೀಮಿಯಂ ಇರುತ್ತದೆ. ಆದಾಗ್ಯೂ, ಪಾಲಿಸಿ ಮೌಲ್ಯ ಮತ್ತು ಪ್ರೀಮಿಯಂ ಅನ್ನು ವ್ಯಕ್ತಿಗಳ ಆದಾಯ ಮತ್ತು ಅವರು ಎದುರಿಸುವ ಅಪಾಯಗಳ ಪಟ್ಟಿಯಿಂದ ನಿರ್ಧರಿಸಲಾಗುತ್ತದೆ.
ಎರಡು ರೀತಿಯ ವೈಯಕ್ತಿಕ ಅಪಘಾತ ಪಾಲಿಸಿಗಳು
ಎರಡು ರೀತಿಯ ವೈಯಕ್ತಿಕ ಅಪಘಾತ ವಿಮಾ ಪಾಲಿಸಿಗಳು ಲಭ್ಯವಿದೆ. ಸಾಮಾನ್ಯ ವಿಮಾ ಕಂಪನಿಗಳು ಈ ಪಾಲಿಸಿಯನ್ನು ಪ್ರತ್ಯೇಕವಾಗಿ ಸ್ವತಂತ್ರ ಪಾಲಿಸಿಯಾಗಿ ನೀಡುತ್ತವೆ. ಜೀವ ವಿಮಾ ಕಂಪನಿಗಳು ಇದನ್ನು ಪೂರಕ ಪಾಲಿಸಿಯಾಗಿಯೂ ನೀಡುತ್ತವೆ. ಸಾಮಾನ್ಯ ವಿಮಾ ಕಂಪನಿಗಳು ನೀಡುವ ಪಾಲಿಸಿಯನ್ನು ವಾರ್ಷಿಕವಾಗಿ ನವೀಕರಿಸಬೇಕು. ಜೀವ ವಿಮಾ ಪಾಲಿಸಿಯೊಂದಿಗೆ ಅಪಘಾತ ವಿಮಾ ಪಾಲಿಸಿ ತೆಗೆದುಕೊಂಡಾಗ ಇದು ದೀರ್ಘಾವಧಿಯದ್ದಾಗಿರುತ್ತದೆ.