60 ವರ್ಷ ಮತ್ತು ಅದರ ಮೇಲ್ಪಟ್ಟವರಿಗಾಗಿ ಪಿಂಚಣಿ ಪಾವತಿಗಾಗಿ ಕೇಂದ್ರ ಸರ್ಕಾರ 2017ರಲ್ಲಿ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಪರಿಚಯಿಸಿತು. ಈ ಯೋಜನೆಯ ಅಡಿ ಅನೇಕ ಯೋಜನೆಗಳು ಇದ್ದು, ಹೂಡಿಕೆದಾರರಿಗೆ ಹೆಚ್ಚಿನ ಲಾಭ ತರಲಿದೆ. ಈ ಯೋಜನೆಗಳು ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದರ ಜೊತೆಗೆ ನಿವೃತ್ತಿಯ ನಂತರದ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುತ್ತವೆ.
ಭಾರತೀಯ ಜೀವ ವಿಮೆಯಿಂದ (ಎಲ್ಐಸಿ)ಆರಂಭವಾದ ಈ ಯೋಜನೆ ಕುರಿತು ಮಾಹಿತಿ ಇಲ್ಲಿದೆ. ಈ ಯೋಜನೆಗೆ ಹೂಡಿಕೆ ಮಾಡಲು ಮತ್ತು ಸವಲತ್ತುಗಳನ್ನು ಪಡೆಯಲು ಇರುವ ಕಡೆಯ ದಿನಾಂಕ ಮಾರ್ಚ್ 31, 2023 ಆಗಿದೆ. ಈ ಹಿನ್ನೆಲೆ ಈ ಯೋಜನೆಯ ಪ್ರಯೋಜನ ಪಡೆದು, ಇದಕ್ಕೆ ಸರಿಯಾದ ಸಮಯದಲ್ಲಿ ಹೂಡಿಕೆ ಮಾಡಬಹುದಾಗಿದೆ.
ಗರಿಷ್ಠ ಹೂಡಿಕೆ: ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಅಡಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಯಕರು ಗರಿಷ್ಠ 15 ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಹೂಡಿಕೆಯ ಮೊತ್ತದ ಮೇಲೆ ವಾರ್ಷಿಕ ಶೇಕಡಾ 7.4 ರ ದರದಲ್ಲಿ ಬಡ್ಡಿ ಲಭ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2023. ಈ ಪಾಲಿಸಿಯಲ್ಲಿ ಒಬ್ಬ ವ್ಯಕ್ತಿ 10 ವರ್ಷಗಳವರೆಗೆ ಹೂಡಿಕೆ ಮಾಡಬೇಕಿದೆ. ಅದು ಕೂಡ ಒಂದೇ ಬಾರಿಗೆ ಸಂಪೂರ್ಣ ಹೂಡಿಕೆಯನ್ನು ಮಾಡಬೇಕು.
ಮಾಸಿಕ ಹಣದ ಲಾಭ:ವ್ಯಕ್ತಿಯೊಬ್ಬರ ಹೂಡಿಕೆ ಆಧಾರದ ಮೇಲೆ ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಎಂಬುದು ಅವಲಂಬಿತವಾಗಿದೆ. ಹೂಡಿಕೆ ಅನುಸಾರ ಪ್ರತಿ ತಿಂಗಳು 1000 ರಿಂದ 9,250 ರೂಪಾಯಿಗಳವರೆಗೆ ಪಿಂಚಣಿ ಲಭ್ಯವಿದೆ.
ಹೀಗಿದೆ ಲೆಕ್ಕಾಚಾರ: ಈ ಯೋಜನೆ ಅಡಿ ಕನಿಷ್ಠ 1.50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 1,000 ರೂಪಾಯಿಗಳವರೆಗೆ ಪಿಂಚಣಿ ಮೊತ್ತವನ್ನು ಪಡೆಯಬಹುದು. ಅದೇ ರೀತಿ 15 ಲಕ್ಷದವರೆಗಿನ ಹೂಡಿಕೆಯ ಮೇಲೆ ತಿಂಗಳಿಗೆ 9,250 ರೂಪಾಯಿಗಳ ಪಿಂಚಣಿ ಲಭ್ಯವಿರುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅವರು 30 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಆಗ ಇಬ್ಬರಿಗೂ ತಿಂಗಳಿಗೆ 18,500 ರೂ ಪಡೆಯಬಹುದಾಗಿದೆ. 2018ರಲ್ಲಿ ಸರ್ಕಾರ ಈ ಹೂಡಿಕೆ ಹಣವನ್ನು ಹೆಚ್ಚಳ ಮಾಡಿತು.