ನವದೆಹಲಿ: ಬ್ಯಾಂಕಿಂಗ್ ಕಾನೂನುಗಳು ಸೇರಿದಂತೆ ಇತರ ಕಾನೂನು, ವಿಲೀನಗಳು ಮತ್ತು ಸ್ವಾಧೀನಗಳ ಕುರಿತಂತೆ ಸಂಸದೀಯ ಸಮಿತಿಯು ಮುಂದಿನ ತಿಂಗಳು ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳೊಂದಿಗೆ ಚರ್ಚೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐದು ಸಾರ್ವಜನಿಕ ವಲಯದ ವಿಮಾ ಕಂಪನಿಗಳೊಂದಿಗೆ ಅವುಗಳ ಕಾರ್ಯನಿರ್ವಹಣೆ ಮತ್ತು ದೇಶದ ವಿಮಾ ಕಾನೂನುಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುವುದು ಎಂದು ಸರ್ಕಾರಿ ದಾಖಲೆಯನ್ನು ಉಲ್ಲೇಖಿಸಿ ಅಧಿಕಾರಿ ತಿಳಿಸಿದ್ದಾರೆ.
ಜನವರಿ 2, 2024ರಂದು ಯುಕೋ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳೊಂದಿಗೆ ಮತ್ತು ಜನವರಿ 6, 2024ರಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಬ್ಯಾಂಕ್ ಆಫ್ ಇಂಡಿಯಾ ನಡುವೆ ಮುಂಬೈ ಮತ್ತು ಗೋವಾಗಳಲ್ಲಿ ಅನೌಪಚಾರಿಕ ಚರ್ಚೆ ನಡೆಯಲಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಜೀವ ವಿಮಾ ನಿಗಮ, ಎಸ್ ಬಿಐ ಲೈಫ್ ಇನ್ಶೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ, ಓರಿಯಂಟಲ್ ಇನ್ಶೂರೆನ್ಸ್ ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗಳೊಂದಿಗೆ ಜನವರಿ 2ರಂದು ಸಭೆ ನಡೆಸಲು ಉದ್ದೇಶಿಸಲಾಗಿದೆ.
ಇದಲ್ಲದೆ ಆರ್ಬಿಐನ ಕಾರ್ಯನಿರ್ವಹಣೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ನಿಯಂತ್ರಿಸುವ ಕಾನೂನಿನ ಬಗ್ಗೆ ಸಭೆಯಲ್ಲಿ ಅನೌಪಚಾರಿಕ ಚರ್ಚೆಗಳು ನಡೆಯಲಿವೆ. ಈ ಮಾಹಿತಿಯನ್ನೊಳಗೊಂಡ ದಾಖಲೆಯು ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಭಾವ್ಯ ವಿಲೀನದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಆದಾಗ್ಯೂ ಈ ಚರ್ಚೆಗಳು ಅಧೀನ ಶಾಸನದ ಸಂಸದೀಯ ಸಮಿತಿಯ ವಾಡಿಕೆಯ ಅಭ್ಯಾಸದ ಭಾಗವಾಗಿವೆ ಮತ್ತು ವಿಲೀನದ ವಿಷಯಕ್ಕೆ ಸಂಬಂಧಿಸಿಲ್ಲ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.