ಇಸ್ಲಾಮಾಬಾದ್:ಒಂದುದೇಶ ಆರ್ಥಿಕ, ರಾಜಕೀಯ ಸಾರ್ವಭೌಮತ್ವ ಸಾಧಿಸದೇ ಇದ್ದರೆ ಏನೇನೆಲ್ಲ ಗಂಭೀರ ಸ್ವರೂಪದ ಸಮಸ್ಯೆಗಳು ಎದುರಾಗಬಹುದು ಎಂಬುದಕ್ಕೆ ಪಾಕಿಸ್ತಾನವೇ ಜ್ವಲಂತ ಸಾಕ್ಷಿ. ಇರಾನ್‌ನಿಂದ ಅಗ್ಗದ ಇಂಧನ ಆಮದು ಮಾಡಿಕೊಳ್ಳಲು ಬಹುಕೋಟಿ ವೆಚ್ಚದ ಯೋಜನೆ ರೂಪಿಸಿ, ಒಪ್ಪಂದ ಮಾಡಿಕೊಂಡಿದ್ದ ಪಾಕಿಸ್ತಾನದ ಮೇಲೆ ಅಮೆರಿಕ ಗದಾಪ್ರಹಾರ ಮಾಡಿದೆ ಎಂದೇ ಹೇಳಲಾಗುತ್ತಿದೆ. ವಿಶ್ವದ ದೊಡ್ಡಣ್ಣ (ಅಮೆರಿಕ) ತನ್ನ ಗುರಿ ಸಾಧನೆಗಾಗಿ ಪಾಕ್-ಇರಾನ್ ಅನಿಲ ಒಪ್ಪಂದವನ್ನೇ ಮುರಿಯುವಂತೆ ಮಾಡಿದ್ದಾನೆ.
ಯೋಜನೆಯ ವಿವರ:ತೀವ್ರ ಆರ್ಥಿಕ ಹಿಂಜರಿತದಿಂದ ನಲುಗಿರುವ ಪಾಕಿಸ್ತಾನ ತನ್ನ ನೆರೆ ದೇಶ ಇರಾನ್‌ನಿಂದ ಅಗ್ಗದ ದರದಲ್ಲಿ ಅನಿಲ ಪೂರೈಕೆ ಒಪ್ಪಂದ ಮಾಡಿಕೊಂಡಿತ್ತು. ಮೊದಲು ಇದನ್ನು ಭಾರತ-ಪಾಕಿಸ್ತಾನ ಮತ್ತು ಇರಾನ್ ಸಹಯೋಗದಲ್ಲಿ ಯೋಜನೆ ರೂಪಿಸಲು ಮುಂದಾಗಿತ್ತು. ಕಾಲಾನಂತರದಲ್ಲಿ ಭಾರತ ಯೋಜನೆಯಿಂದ ಹಿಂದೆ ಸರಿದಿತ್ತು. ಬಳಿಕ ಪಾಕ್ ಮತ್ತು ಇರಾನ್ 7.5 ಬಿಲಿಯನ್ ಡಾಲರ್ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದವು.
ಕಳೆದ ವಾರ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದೊಲ್ಲಾಹಿಯಾನ್ ಪಾಕಿಸ್ತಾನಕ್ಕೆ ಮೂರು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಯೋಜನೆಯನ್ನು ಪೂರ್ಣಗೊಳಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. "ಇದು ಎರಡು ದೇಶಗಳ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುತ್ತದೆ. ಈಗಾಗಲೇ ಯೋಜನೆಯ ಭಾಗವಾಗಿ ಇರಾನ್‌ನಿಂದ 1,150 ಕಿಲೋಮೀಟರ್ ಪೈಪ್‌ಲೈನ್‌ನ ಹಾಕಲಾಗಿದೆ. ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಆರಂಭಿಸಬೇಕಿದೆ" ಎಂದು ಹೇಳಿದ್ದರು.
2013ರಲ್ಲಿ ಯೋಜನೆಗೆ ಒಪ್ಪಿಗೆ:ಪಾಕಿಸ್ತಾನದ ಆಗಿನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಇರಾನ್ನ ಮಹಮೂದ್ ಅಹ್ಮದಿನೆಜಾದ್ 2013ರ ಮಾರ್ಚ್‌ನಲ್ಲಿ ಜಂಟಿಯಾಗಿ ಚಬಹಾರ್ ಬಳಿಯ ಗಬ್ದ್‌ನಲ್ಲಿ ಅಂದಿನ ಅಂದಾಜು ವೆಚ್ಚ 7.5 ಬಿಲಿಯನ್ ಡಾಲರ್ ಯೋಜನೆಗೆ ಅಂಕಿತ ಹಾಕಿದ್ದರು. ಅದಾದ ಬಳಿಕ ನಾನಾ ಕಾರಣಗಳಿಗಾಗಿ ಕುಂಟುತ್ತಾ ಸಾಗಿದ್ದ ಯೋಜನೆ ಸ್ಥಗಿತಕ್ಕೆ ಅಮೆರಿಕ ಈಗ ತೀವ್ರ ಒತ್ತಡ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.