ನವದೆಹಲಿ:ಜಾಗತಿಕ ಟ್ರಾವೆಲ್ ಟೆಕ್ ಬ್ರಾಂಡ್ ಓಯೋ ಇದೇ ಮೊದಲ ಬಾರಿಗೆ ಲಾಭ ಗಳಿಸಿರುವುದಾಗಿ ವರದಿ ಮಾಡಿದೆ. 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ತೆರಿಗೆ ನಂತರ 16 ಕೋಟಿ ರೂ. ಲಾಭ ಮಾಡಿರುವುದಾಗಿ ಓಯೋ ಹೇಳಿದೆ. ಕಂಪನಿಯ ಉನ್ನತ ಆಡಳಿತ ಮಂಡಳಿಗೆ ಬರೆದ ಪತ್ರದಲ್ಲಿ, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು 2024 ರ ಎರಡನೇ ತ್ರೈಮಾಸಿಕವು ಕಂಪನಿಯ ಮೊದಲ ಲಾಭದಾಯಕ ತ್ರೈಮಾಸಿಕವಾಗಿದ್ದು, ತೆರಿಗೆ ನಂತರದ ಲಾಭವು (ಪಿಎಟಿ) 16 ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಓಯೋ 10 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ತಂಡವನ್ನು ಅಭಿನಂದಿಸಿದ ಅಗರ್ವಾಲ್, "ಈ ತ್ರೈಮಾಸಿಕದ ಪ್ರಸ್ತುತ ಬೆಳವಣಿಗೆಯ ಪ್ರಕಾರ, 2024 ರ ಎರಡನೇ ತ್ರೈಮಾಸಿಕದಲ್ಲಿ ನಮ್ಮ ಕಂಪನಿಯು ಇದೇ ಮೊದಲ ಬಾರಿಗೆ ತೆರಿಗೆ ನಂತರದ 16 ಕೋಟಿ ರೂ. ಯೋಜಿತ ಲಾಭ ಗಳಿಸಿದೆ" ಎಂದು ಬರೆದಿದ್ದಾರೆ. ಕಾರ್ಯಾಚರಣೆಗಳಿಂದ ಬರುವ ಆದಾಯವು 2022 ರ ಹಣಕಾಸು ವರ್ಷದಲ್ಲಿ 4,781 ಕೋಟಿ ರೂ.ಗಳಿಂದ 2023 ರ ಹಣಕಾಸು ವರ್ಷದಲ್ಲಿ 5,463 ಕೋಟಿ ರೂ.ಗೆ ಏರಿದೆ. ಇದು ಶೇಕಡಾ 14 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದ್ದಾರೆ.
"ನಾವು ನಮ್ಮ ನಷ್ಟವನ್ನು 1,286 ಕೋಟಿ ರೂ.ಗೆ ಇಳಿಸಿದ್ದೇವೆ. ನಮ್ಮ ಸರಿಹೊಂದಿಸಿದ ಒಟ್ಟು ಲಾಭಾಂಶವು ಆದಾಯದ ಶೇಕಡಾ 43 ಕ್ಕೆ ಏರಿದೆ ಮತ್ತು ಸರಿಹೊಂದಿಸಿದ ಒಟ್ಟು ಲಾಭವು 2022 ರ ಹಣಕಾಸು ವರ್ಷದಲ್ಲಿ 1,915 ಕೋಟಿ ರೂ. ಗಳಿಂದ 2023 ರ ಹಣಕಾಸು ವರ್ಷದಲ್ಲಿ 2,347 ಕೋಟಿ ರೂ.ಗೆ ಏರಿದೆ" ಎಂದು ಅಗರ್ವಾಲ್ ಬರೆದಿದ್ದಾರೆ.