ನವದೆಹಲಿ:ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಲಾಭದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಕಂಪನಿಗಳು ಆರ್ಥಿಕ ನಷ್ಟದಿಂದ ಚೇತರಿಸಿಕೊಂಡಿವೆ. ಧನಾತ್ಮಕ ಆರ್ಥಿಕ ಪ್ರಗತಿ ಕಂಡ ಕಾರಣ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಣೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ತೈಲ ಮಾರುಕಟ್ಟೆ ಕಂಪನಿಗಳು ತ್ರೈಮಾಸಿಕದಲ್ಲಿ ಉತ್ತಮ ಲಾಭ ಗಳಿಸಿವೆ. ಮುಂದಿನ ಕ್ವಾರ್ಟರ್ನಲ್ಲೂ ಇಷ್ಟೇ ಲಾಭ ನಿರೀಕ್ಷೆ ಇದೆ. ಹೀಗಾಗಿ ದುಬಾರಿಯಾಗಿರುವ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲು ಚಿಂತನೆ ನಡೆಸಿವೆ ಎಂದು ತಿಳಿದು ಬಂದಿದೆ. ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಯ (OPEC) ಸದಸ್ಯ ರಾಷ್ಟ್ರವೊಂದು ತೈಲ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇದು ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಲಾಗಿದೆ.
ತೈಲ ಪೂರೈಕೆಯಲ್ಲಿ ಕೊರತೆ ಇಲ್ಲ:ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯದ ಅಧಿಕಾರಿಯ ಪ್ರಕಾರ, ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೈಲ ಪೂರೈಕೆ ಮಾಡಲಾಗಿದೆ. ಹೀಗಾಗಿ ಯಾವುದೇ ದೇಶದ ತೈಲ ಉತ್ಪನ್ನ ಸ್ಥಗಿತ ಪರಿಣಾಮ ಬೀರುವುದಿಲ್ಲ. OPEC ದೇಶಗಳು ಅವುಗಳ ವರ್ಷದ ಯೋಜಿತ ತೈಲ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ವಿಶ್ವದ ಪ್ರಮುಖ ತೈಲ ರಫ್ತುದಾರ ರಾಷ್ಟ್ರವಾದ ಸೌದಿ ಅರೇಬಿಯಾ ಕೂಡ ಜುಲೈನಿಂದ ಉತ್ಪಾದನೆ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. ತೈಲ ಉತ್ಪಾದಕ ರಾಷ್ಟ್ರದ ಈ ನಿರ್ಧಾರ ಕಚ್ಚಾ ತೈಲ ಪೂರೈಕೆಯ ಕೊರತೆಯನ್ನು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಮೂಲಗಳು ಅಂದಾಜಿಸಿವೆ. ಕಚ್ಚಾ ತೈಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಮತ್ತಷ್ಟು ಉತ್ಪಾದನೆ ಕಡಿತವನ್ನು ತೆಗೆದುಕೊಳ್ಳುವ ತೈಲೋತ್ಪಾದನಾ ರಾಷ್ಟ್ರಗಳ ಈ ನಿರ್ಧಾರವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.