ವಾಷಿಂಗ್ಟನ್ : ಫಿನ್ಲೆಂಡ್ ಮೂಲದ ಬಹುರಾಷ್ಟ್ರೀಯ ಕಂಪನಿ ನೋಕಿಯಾ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತನ್ನ ಲೋಗೊ ಬದಲಾವಣೆ ಮಾಡಿದೆ. ಹೊಸ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ವೇಗದ ಬೆಳವಣಿಗೆ ಹಾಗೂ ತನ್ನ ಕಾರ್ಯಶೈಲಿಯಲ್ಲಿ ಬದಲಾವಣೆ ಸೂಚಿಸಲು ನೋಕಿಯಾ ಲೋಗೊ ಬದಲಾವಣೆ ಮಾಡಿಕೊಂಡಿದೆ. ತಂತ್ರಜ್ಞಾನ ವರದಿ ಮಾಡುವ ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಪೆಕ್ಕಾ ಲುಂಡ್‌ಮಾರ್ಕ್ ಇವರು ನೋಕಿಯಾದ ಟೆಲಿಕಾಂ ಉಪಕರಣಗಳ ವಿಭಾಗದ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಈ ಪ್ರಮುಖ ಬದಲಾವಣೆಯಾಗಿದೆ. ಕಂಪನಿಯ ಉನ್ನತಿಗಾಗಿ ಮರು ಹೊಂದಾಣಿಕೆ, ವೇಗವರ್ಧನೆ ಮತ್ತು ಪ್ರಮಾಣ ಹೀಗೆ ಮೂರು ಹಂತದ ಕಾರ್ಯಯೋಜನೆಯನ್ನು ಹೊಸ ಸಿಇಒ ಪೆಕ್ಕಾ ಲುಂಡ್‌ಮಾರ್ಕ್ ರೂಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ತನ್ನ ಹೆಸರು ಹಾಗೂ ಲೋಗೊದಲ್ಲಿ ನೀಲಿ ವರ್ಣವನ್ನು ಇನ್ನು ಮುಂದೆ ನೋಕಿಯಾ ಬಳಸುವುದಿಲ್ಲ. ಬದಲಾಗಿ, ಸಂದರ್ಭಗಳಿಗೆ ತಕ್ಕಂತೆ ಯಾವ ಶೇಡ್ ಉತ್ತಮವಾಗಿ ಹೊಂದಿಕೊಳ್ಳುತ್ತದೆಯೋ ಅದಕ್ಕೆ ತಕ್ಕಂತೆ ಬಳಸಲಾಗುತ್ತದೆ. ಹೀಗಾಗಿ ಯಾವುದೇ ನಿರ್ದಿಷ್ಟ ಬಣ್ಣದ ಯೋಜನೆ ಇಟ್ಟುಕೊಳ್ಳಲಾಗಿಲ್ಲ. ನೋಕಿಯಾ ಇನ್ನು ಮುಂದೆ ಕೇವಲ ಸ್ಮಾರ್ಟ್‌ಫೋನ್ ಕಂಪನಿಯಲ್ಲ, ಇದು ವಾಣಿಜ್ಯ ತಂತ್ರಜ್ಞಾನ ಕಂಪನಿ ಎಂದು ಲುಂಡ್‌ಮಾರ್ಕ್ ಹೇಳಿದ್ದಾರೆ.
ನೋಕಿಯಾ ತನ್ನ ಟೆಲಿಕಾಂ ಸಲಕರಣೆ ವ್ಯಾಪಾರವನ್ನು ವಿಸ್ತರಿಸುವುದರ ಜೊತೆಗೆ ಇತರ ವ್ಯವಹಾರಗಳಿಗೆ ಉಪಕರಣಗಳನ್ನು ಮಾರಾಟ ಮಾಡುವತ್ತ ಗಮನಹರಿಸಲಿದೆ. ಇವುಗಳಲ್ಲಿ ಅಟೊಮೇಟೆಡ್ ಮ್ಯಾನುಪ್ಯಾಕ್ಚರಿಂಗ್ ಮತ್ತು ಖಾಸಗಿ 5G ನೆಟ್‌ವರ್ಕ್‌ಗಳ ಪರಿಕರಗಳು ಸೇರಿವೆ. ಇದರಿಂದ ನೋಕಿಯಾ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ನೊಂದಿಗೆ ನೇರ ಸ್ಪರ್ಧೆಗಿಳಿಯಲಿದೆ. ನೋಕಿಯಾ ಮತ್ತಷ್ಟು ವಲಯಗಳಿಗೆ ತನ್ನ ಕಾರ್ಯಕ್ಷೇತ್ರ ವಿಸ್ತರಿಸಲು ಮತ್ತು ಅಭಿವೃದ್ಧಿಪಡಿಸಲು ಚಿಂತಿಸುತ್ತಿದೆ ಎಂದು ಲುಂಡ್‌ಮಾರ್ಕ್ ಹೇಳಿದ್ದಾರೆ.