ನವದೆಹಲಿ:ಕಚ್ಚಾ ತೈಲ ಆಮದು ವ್ಯವಹಾರಕ್ಕೆ ವಿಶ್ವದ ರಾಷ್ಟ್ರಗಳು ಭಾರತೀಯ ರೂಪಾಯಿಯನ್ನು ಡೀಫಾಲ್ಟ್ ಕರೆನ್ಸಿಯಾಗಿ ಬಳಸಬೇಕೆಂಬ ಭಾರತದ ಪ್ರಯತ್ನಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಹಣ ವಾಪಸು ಕಳುಹಿಸುವುದು ಮತ್ತು ಹೆಚ್ಚಿನ ವಹಿವಾಟು ವೆಚ್ಚಗಳ ಬಗ್ಗೆ ತೈಲ ಪೂರೈಕೆದಾರರು ಕಳವಳ ವ್ಯಕ್ತಪಡಿಸಿರುವುದೇ ಇದಕ್ಕೆ ಕಾರಣ ಎಂದು ತೈಲ ಸಚಿವಾಲಯವು ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.
ಅಂತರರಾಷ್ಟ್ರೀಯ ವ್ಯಾಪಾರ ಅಭ್ಯಾಸಗಳ ಪ್ರಕಾರ ಯುಎಸ್ ಡಾಲರ್ ಕಚ್ಚಾ ತೈಲದ ಆಮದಿನ ಎಲ್ಲಾ ಒಪ್ಪಂದಗಳಿಗೆ ಡೀಫಾಲ್ಟ್ ಪಾವತಿ ಕರೆನ್ಸಿಯಾಗಿದೆ. ಆದಾಗ್ಯೂ ಭಾರತೀಯ ಕರೆನ್ಸಿಯನ್ನು ಅಂತರರಾಷ್ಟ್ರೀಯಗೊಳಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜುಲೈ 11, 2022 ರಂದು ಆಮದುದಾರರಿಗೆ ರೂಪಾಯಿಯಲ್ಲಿ ಪಾವತಿಸಲು ಮತ್ತು ರಫ್ತುದಾರರಿಗೆ ರೂಪಾಯಿಯಲ್ಲಿ ಮೊತ್ತ ಪಡೆಯಲು ಅವಕಾಶ ನೀಡಿತ್ತು. ಆದರೆ ಆಯ್ದ ಕೆಲವು ದೇಶಗಳೊಂದಿಗೆ ತೈಲೇತರ ವ್ಯಾಪಾರದಲ್ಲಿ ಸ್ವಲ್ಪ ಯಶಸ್ಸು ಕಂಡುಬಂದಿದ್ದರೂ, ತೈಲ ರಫ್ತುದಾರರು ಮಾತ್ರ ರೂಪಾಯಿಯನ್ನು ದೂರವಿಟ್ಟಿದ್ದಾರೆ.
"2022-23ರ ಹಣಕಾಸು ವರ್ಷದಲ್ಲಿ ತೈಲ ಪಿಎಸ್ಯುಗಳು ಯಾವುದೇ ಕಚ್ಚಾ ತೈಲ ಆಮದನ್ನು ಭಾರತೀಯ ರೂಪಾಯಿಯಲ್ಲಿ ನಡೆಸಿಲ್ಲ. ಕಚ್ಚಾ ತೈಲ ಪೂರೈಕೆದಾರರು (ಯುಎಇಯ ಎಡಿಎನ್ಒಸಿ ಸೇರಿದಂತೆ) ಆದ್ಯತೆಯ ಕರೆನ್ಸಿಯಲ್ಲಿ ಹಣವನ್ನು ವಾಪಸು ಕಳುಹಿಸುವ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ ಮತ್ತು ವಿನಿಮಯ ಏರಿಳಿತದ ಅಪಾಯಗಳಿಂದಾಗಿ ಹೆಚ್ಚಿನ ವಹಿವಾಟು ವೆಚ್ಚಗಳನ್ನು ಎತ್ತಿ ತೋರಿಸಿದ್ದಾರೆ" ಎಂದು ತೈಲ ಸಚಿವಾಲಯ ಸಂಸದೀಯ ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಗೆ ತಿಳಿಸಿದೆ.