ಮುಂಬೈ: ಇಂಧನ ಮತ್ತು ಹಣಕಾಸು ಷೇರುಗಳ ಬೆಲೆಗಳಲ್ಲಿ ಏರಿಕೆಯಿಂದಾಗಿ ಭಾರತೀಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಮೇಲ್ಮಟ್ಟದಲ್ಲಿ ಕೊನೆಗೊಂಡವು. ಬಿಎಸ್ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 245.86 ಪಾಯಿಂಟ್ಸ್ ಏರಿಕೆಯಾಗಿ 67,466.99 ಕ್ಕೆ ಸ್ಥಿರವಾಯಿತು. ನಿಫ್ಟಿ 50 ಸೂಚ್ಯಂಕವು ಪಾಯಿಂಟ್ಸ್ ಏರಿಕೆಯಾಗಿ ದಾಖಲೆಯ 20,070 ರಲ್ಲಿ ಕೊನೆಗೊಂಡಿತು.
ದೇಶೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾದ ಸ್ಮಾಲ್ ಕ್ಯಾಪ್ ಮತ್ತು ಮಿಡ್ - ಕ್ಯಾಪ್ ಷೇರುಗಳು ಲಾಭ ಮತ್ತು ನಷ್ಟಗಳ ನಡುವೆ ಏರಿಳಿತಗೊಳ್ಳುವ ಮೂಲಕ ಚಂಚಲತೆಯನ್ನು ಪ್ರದರ್ಶಿಸಿದವು. ಹಿಂದಿನ ವಹಿವಾಟಿನಲ್ಲಿ ವರ್ಷದ ಅತ್ಯಂತ ಗಮನಾರ್ಹ ಇಂಟ್ರಾಡೇ ಕುಸಿತವನ್ನು ಇವು ಅನುಭವಿಸಿದ್ದವು. ಸ್ಮಾಲ್ ಕ್ಯಾಪ್ ಷೇರುಗಳು ಶೇಕಡಾ 1.02 ರಷ್ಟು ಏರಿಕೆಯೊಂದಿಗೆ ಕೊನೆಗೊಂಡರೆ, ಮಿಡ್ ಕ್ಯಾಪ್ ಷೇರುಗಳು ಶೇಕಡಾ 0.19 ರಷ್ಟು ಏರಿಕೆಯಾದವು.
ಮಾರುಕಟ್ಟೆಯಲ್ಲಿ, ಹಣಕಾಸು ಮತ್ತು ಬ್ಯಾಂಕಿಂಗ್ ವಲಯಗಳು ಕ್ರಮವಾಗಿ 0.41% ಮತ್ತು 0.87% ನಷ್ಟು ಲಾಭ ದಾಖಲಿಸಿದರೆ, ಇಂಧನ ಷೇರುಗಳು 0.93% ಹೆಚ್ಚಳವನ್ನು ದಾಖಲಿಸಿವೆ. ಅಲ್ಲದೆ ಸಾರ್ವಜನಿಕ ವಲಯದ ಬ್ಯಾಂಕ್ಗಳು 4.23% ರಷ್ಟು ಗಮನಾರ್ಹ ಜಿಗಿತವನ್ನು ಕಂಡಿವೆ.
ಸೆನ್ಸೆಕ್ಸ್ ನಲ್ಲಿ 20 ಷೇರುಗಳು ಏರಿಕೆಯಲ್ಲಿ ಕೊನೆಗೊಂಡರೆ, 10 ಷೇರುಗಳು ಕುಸಿದವು. ವಿಶಾಲ ನಿಫ್ಟಿ ಇದೇ ಮೊದಲ ಬಾರಿಗೆ 20,000 ಗಡಿಯನ್ನು ದಾಟಿತು. ನಿಫ್ಟಿ 76.80 ಪಾಯಿಂಟ್ ಅಥವಾ ಶೇಕಡಾ 0.38 ರಷ್ಟು ಏರಿಕೆ ಕಂಡು 20,070 ಕ್ಕೆ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ನಿಫ್ಟಿ-50 ಷೇರುಗಳ ಪೈಕಿ 31 ಷೇರುಗಳು ಏರಿಕೆ ಕಂಡರೆ, 19 ಷೇರುಗಳು ಕುಸಿದವು.
ಸೆನ್ಸೆಕ್ಸ್ ಷೇರುಗಳ ಪೈಕಿ ಭಾರ್ತಿ ಏರ್ಟೆಲ್ ಶೇ 2.72ರಷ್ಟು ಏರಿಕೆ ಕಂಡಿದೆ. ಟೈಟಾನ್, ಇಂಡಸ್ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಎನ್ಟಿಪಿಸಿ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ಲಾಭ ಗಳಿಸಿದವು. ಮಹೀಂದ್ರಾ & ಮಹೀಂದ್ರಾ, ಲಾರ್ಸೆನ್ ಆಂಡ್ ಟೂಬ್ರೊ, ನೆಸ್ಲೆ, ಜೆಎಸ್ಡಬ್ಲ್ಯೂ ಸ್ಟೀಲ್, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟೆಕ್ ಮಹೀಂದ್ರಾ ಮತ್ತು ಮಾರುತಿ ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.
ದೇಶದ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ 15 ತಿಂಗಳ ಗರಿಷ್ಠ ಶೇಕಡಾ 7.44 ಕ್ಕೆ ತಲುಪಿತ್ತು. ಇದು ಆಗಸ್ಟ್ನಲ್ಲಿ ಶೇಕಡಾ 6.83 ಕ್ಕೆ ಇಳಿದಿದೆ. ಮುಖ್ಯವಾಗಿ ತರಕಾರಿಗಳ ಬೆಲೆಗಳು ಕಡಿಮೆಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ಕೊಂಚ ಇಳಿಕೆಯಾಗಿದೆ. ಇನ್ನು ಮುಖ್ಯವಾಗಿ ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ಕ್ಷೇತ್ರಗಳ ಉತ್ತಮ ಪ್ರದರ್ಶನದಿಂದಾಗಿ ದೇಶದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಜುಲೈನಲ್ಲಿ ಐದು ತಿಂಗಳ ಗರಿಷ್ಠವಾದ ಶೇಕಡಾ 5.7 ಕ್ಕೆ ಏರಿದೆ ಎಂದು ಮಂಗಳವಾರ ಬಿಡುಗಡೆಯಾದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ : ಸಾಲ ತೀರಿದ 30 ದಿನಗಳಲ್ಲಿ ಮೂಲ ದಾಖಲೆ ಮರಳಿಸದಿದ್ದರೆ ದಿನಕ್ಕೆ 5 ಸಾವಿರ ರೂ. ದಂಡ: ಆರ್ಬಿಐ ಹೊಸ ನಿಯಮ