ನಾಸಿಕ್ (ಮಹಾರಾಷ್ಟ್ರ) : ಕಳೆದ 13 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಇಲ್ಲಿನ ಈರುಳ್ಳಿ ಸಗಟು ವ್ಯಾಪಾರಿಗಳು ಸೋಮವಾರ ತಡರಾತ್ರಿ ಕೊನೆಗೂ ಹಿಂಪಡೆದಿದ್ದಾರೆ. ನವರಾತ್ರಿ ಮತ್ತು ದೀಪಾವಳಿ ಹಬ್ಬಗಳು ಹತ್ತಿರವಿರುವ ಈ ಸಮಯದಲ್ಲಿ ಮುಷ್ಕರ ಕೊನೆಗೊಂಡಿದ್ದು ಸಮಾಧಾನದ ವಿಷಯವಾಗಿದೆ. ಮಂಗಳವಾರ ಬೆಳಗ್ಗೆ ಈರುಳ್ಳಿ ತುಂಬಿದ ಲಾರಿಗಳು ಇಲ್ಲಿನ ಎಪಿಎಂಸಿಗೆ ಆಗಮಿಸಿದ್ದು, ಹರಾಜು ಪುನಾರಂಭಗೊಂಡಿದೆ.
ಮುಷ್ಕರ ಹಿಂತೆಗೆದುಕೊಂಡ ಸುದ್ದಿ ಹರಡುತ್ತಿದ್ದಂತೆಯೇ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಯಾರ್ಡ್ ಲಾಸಲ್ಗಾಂವ್ ಸೇರಿದಂತೆ ಇತರ ಮಂಡಿಗಳಿಗೆ ಈರುಳ್ಳಿ ತುಂಬಿದ ಸುಮಾರು ನೂರು ಟ್ರಕ್ಗಳು ಆಗಮಿಸಿವೆ. ಅಂದಾಜು 75,000-80,000 ಕ್ವಿಂಟಾಲ್ ಈರುಳ್ಳಿಯನ್ನು ಇಂದು ಹರಾಜು ಮಾಡುವ ಸಾಧ್ಯತೆಯಿದೆ. ಇದು ಈ ಎಪಿಎಂಸಿಗಳಲ್ಲಿ ದೈನಂದಿನ ವ್ಯಾಪಾರದ ಸಾಮಾನ್ಯ ಕೋಟಾದ ಅರ್ಧದಷ್ಟಾಗಿದೆ ಎಂದು ಸ್ಥಳೀಯ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ನಾಸಿಕ್ ಉಸ್ತುವಾರಿ ಸಚಿವರು ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ ನಂತರ ಮುಷ್ಕರ ಕೊನೆಗೊಂಡಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಕೊರತೆ ಮತ್ತು ಬೆಲೆ ಏರಿಕೆಯ ಆತಂಕದ ಮಧ್ಯೆ, 13 ದಿನಗಳ ಮುಷ್ಕರದಿಂದ ರೈತರಿಗೆ ತೀವ್ರವಾಗಿ ಹಾನಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಾಸಿಕ್ ಜಿಲ್ಲಾ ಈರುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಖಂಡು ಡಿಯೋರ್ ಹೇಳಿದ್ದಾರೆ.