ಬೆಂಗಳೂರು : ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ (AMFI) ಒದಗಿಸಿದ ಮಾಹಿತಿಯ ಪ್ರಕಾರ, ಮ್ಯೂಚುವಲ್ ಫಂಡ್ (MF) ಉದ್ಯಮದಲ್ಲಿ ಮಹಿಳಾ ಹೂಡಿಕೆದಾರರ ಸಂಖ್ಯೆ ಡಿಸೆಂಬರ್ 2019 ರಲ್ಲಿ ಇದ್ದ 46.99 ಲಕ್ಷಕ್ಕೆ ಹೋಲಿಸಿದರೆ ಡಿಸೆಂಬರ್ 2022 ರ ಅಂತ್ಯದ ವೇಳೆಗೆ 27 ಲಕ್ಷ ಹೆಚ್ಚಳವಾಗಿ 74.49 ಲಕ್ಷಕ್ಕೆ ತಲುಪಿದೆ. ಒಟ್ಟಾರೆಯಾಗಿ PAN/PEKRN (PAN ವಿನಾಯತಿ KYC ಉಲ್ಲೇಖ ಸಂಖ್ಯೆ) ಮೂಲಕ ಲೆಕ್ಕ ಹಾಕಲಾದ ಅನನ್ಯ ಹೂಡಿಕೆದಾರರ ಸಂಖ್ಯೆಯು ಮೂರು ಪಟ್ಟು ಹೆಚ್ಚಳವಾಗಿದೆ. ಇದು ಮಾರ್ಚ್ 2017 ರ ಅಂತ್ಯದ ವೇಳೆಗೆ ಇದ್ದ 1.20 ಕೋಟಿಯಿಂದ ಮಾರ್ಚ್ 2023 ರ ಅಂತ್ಯಕ್ಕೆ 3.77 ಕೋಟಿಗೆ ಏರಿದೆ.
ಕೋವಿಡ್ -19 ಸಾಂಕ್ರಾಮಿಕದ ನಂತರ ನಂತರ ಹೂಡಿಕೆದಾರರ ಸಂಖ್ಯೆಯಲ್ಲಿ ದೊಡ್ಡ ಜಿಗಿತ ಕಂಡುಬಂದಿದೆ. ಮಾರ್ಚ್ 2020 ರ ಅಂತ್ಯದ ವೇಳೆಗೆ 2.08 ಕೋಟಿ ಇದ್ದ ಹೂಡಿಕೆದಾರರ ಸಂಖ್ಯೆ ಮಾರ್ಚ್ 2023 ರ ಅಂತ್ಯಕ್ಕೆ 3.77 ಕೋಟಿಗೆ ಏರಿಕೆಯಾಗಿದೆ. ಈ ಬಗ್ಗೆ ಮಾತನಾಡಿದ ಎಎಂಎಫ್ಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎನ್ ಎಸ್ ವೆಂಕಟೇಶ್, "ಕಡಿಮೆ ಬೆಳವಣಿಗೆಯ ಮಾರುಕಟ್ಟೆಗಳ ಹೊರತಾಗಿಯೂ ಕಳೆದ ವರ್ಷ ಸುಮಾರು 40 ಲಕ್ಷ ಹೊಸ ಹೂಡಿಕೆದಾರರು ಮ್ಯೂಚುವಲ್ ಫಂಡ್ ಜಗತ್ತಿಗೆ ಬಂದಿದ್ದಾರೆ" ಎಂದರು.
ವಯೋಮಾನದ ಪ್ರಕಾರ ನೋಡಿದರೆ, ಒಟ್ಟಾರೆ ಹೂಡಿಕೆದಾರರಲ್ಲಿ ಸುಮಾರು 35 ಪ್ರತಿಶತ 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. 18 ಮತ್ತು 24 ವರ್ಷಗಳ ನಡುವಿನ ಹೂಡಿಕೆದಾರರ ಶೇಕಡಾವಾರು ಪಾಲು ಕಳೆದ 10 ಹಣಕಾಸು ವರ್ಷಗಳಲ್ಲಿ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ತೋರಿಸಿವೆ. 28.45 ಲಕ್ಷದಷ್ಟು ಗರಿಷ್ಠ ಸಂಖ್ಯೆಯ ಮಹಿಳಾ ಹೂಡಿಕೆದಾರರು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಇದಲ್ಲದೆ, 2.82 ಲಕ್ಷ ಮಹಿಳಾ ಹೂಡಿಕೆದಾರರು 18 ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ.