ನವದೆಹಲಿ :ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇಂದು ಬೆಳಗ್ಗೆ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದು, ಆ ಟ್ವೀಟ್ ನೋಡಿರುವ ಅವರ ತಾಯಿ ಕೂಡ ಮಗನ ಮೇಲೆ ಮುನಿಸಿಕೊಂಡಿದ್ದಾರೆ. 'ಒಂದು ವೇಳೆ ನಾನು ನಿಗೂಢವಾಗಿ ಸತ್ತರೆ, ಅದನ್ನು ತಿಳಿಯಲು ಚೆನ್ನಾಗಿರುತ್ತದೆ' ಎಂಬ ಮಸ್ಕ್ ಟ್ವೀಟ್ಗೆ ತಾಯಿ ಮಾಯೆ ಮಸ್ಕ್ 'ಇದು ತಮಾಷೆಯಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ತಾಯಿಯ ಟ್ವೀಟ್ಗೆ ಸ್ಪಂದಿಸಿರುವ ಎಲೋನ್ 'ಕ್ಷಮಿಸಿ! ನಾನು ಜೀವಂತವಾಗಿರಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ' ಎಂದಿದ್ದಾರೆ. ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಬಝ್ ಸೃಷ್ಟಿಸಿದ್ದು, 91 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಚಿಂತೆಗೀಡು ಮಾಡಿದೆ. 'ಇಲ್ಲ, ನೀವು ಸಾಯುವುದಿಲ್ಲ. ಜಗತ್ತಿನ ಸುಧಾರಣೆಗೆ ನಿಮ್ಮ ಅಗತ್ಯವಿದೆ' ಎಂದು ಒಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. 'ನಾವು ಎಷ್ಟೇ ಖರ್ಚಾದರೂ ನಿಮ್ಮನ್ನು ರಕ್ಷಿಸಬೇಕು. ನಿಮ್ಮ ಮೇಲೆ ಮಾನವೀಯತೆಯಿದೆ' ಎಂದು ಇನ್ನೊಬ್ಬ ಟ್ವೀಟ್ ಮಾಡಿದ್ದಾನೆ.
ಟ್ವಿಟರ್ ಅನ್ನು $44 ಶತಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ ಎಲೋನ್ ತಮ್ಮ ಸಾವಿನ ಬಗ್ಗೆ ರಹಸ್ಯವಾದ ಟ್ವೀಟ್ ಪೋಸ್ಟ್ ಮಾಡಿರುವುದು ಇದೇ ಮೊದಲಲ್ಲ. ಇದೇ ವರ್ಷದ ಮಾರ್ಚ್‌ನಲ್ಲಿಯೂ, ನನಗೆ ಸಾವು ಒಂಥರಾ ನೆಮ್ಮದಿಯನ್ನು ನೀಡುತ್ತದೆ ಎಂದು ಟ್ವೀಟ್ ಮಾಡಿದ್ದರು. ಜರ್ಮನ್ ಪಬ್ಲಿಷಿಂಗ್ ಕಂಪನಿ ಆಕ್ಸೆಲ್ ಸ್ಪ್ರಿಂಗರ್‌ನ ಸಿಇಒ ಮಥಿಯಾಸ್ ಡೊಫ್ನರ್ ಅವರೊಂದಿಗಿನ ಸಂದರ್ಶನದಲ್ಲಿ, ಎಲೋನ್ ಮಸ್ಕ್ ಅವರು ದೀರ್ಘಕಾಲದವರೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದರು.
ನಾನು ಖಂಡಿತವಾಗಿಯೂ ದೀರ್ಘಕಾಲದವರೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುತ್ತೇನೆ. ಆದರೆ, ನನಗೆ ಸಾಯುವ ಬಗ್ಗೆ ಭಯವಿಲ್ಲ. ನಾನು ಸಾವೆಂದರೆ ಎಲ್ಲದರಿಂದ ಮುಕ್ತಿ ಎಂದು ಭಾವಿಸಿದ್ದೇನೆ. ಆದಾಗ್ಯೂ, ಸ್ಪೇಸ್‌ಎಕ್ಸ್‌ನ ದೃಷ್ಟಿಕೋನ ನಿಜವಾಗುವುದನ್ನು ನೋಡಲು ತಾನು ದೀರ್ಘಕಾಲ ಬದುಕಲು ಬಯಸುತ್ತೇನೆ ಎಂದು ಎಲೋನ್ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ:ಟ್ವಿಟ್ಟರ್ ಸಾಮಾನ್ಯ ಬಳಕೆದಾರರಿಗೆ ಉಚಿತ; ವಾಣಿಜ್ಯ, ಸರ್ಕಾರದವರಿಗೆ ದುಡ್ಡು ಖಚಿತ!