ಹೈದರಾಬಾದ್ : OpenAI ನ ಕೃತಕ ಬುದ್ಧಿಮತ್ತೆ ಸಾಫ್ಟವೇರ್ ಆಗಿರುವ ಚಾಟ್ ಜಿಪಿಟಿಗೆ ಮಾರು ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಕೆಲವರು ಅದರ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಎಲೋನ್ ಮಸ್ಕ್ ಮಾತ್ರ ಆ ಕಂಪನಿಯು ದಿಢೀರ್ ಆಗಿ ಬೃಹತ್ ಲಾಭ ಮಾಡಿರುವ ಕ್ರಮದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಚಾಟ್‌ಜಿಪಿಟಿ ಮಾತೃ ಸಂಸ್ಥೆಯ ಸ್ಥಾಪಕ ಸದಸ್ಯರೂ ಆಗಿದ್ದ ಬಿಲಿಯನೇರ್ ಎಲೋನ್ ಮಸ್ಕ್, ಲಾಭ ರಹಿತ ಸಂಸ್ಥೆಯಿಂದ ಲಾಭಸಹಿತ ಸಂಸ್ಥೆಗೆ ಪರಿವರ್ತನೆಯಾಗಿರುವುದು ಕಾನೂನುಬದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಎಲೋನ್ ಮಸ್ಕ್ ಬುಧವಾರ ಟ್ವೀಟ್ ಮಾಡಿದ್ದು, ನಾನು ಸುಮಾರು 100 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದ ಲಾಭ ರಹಿತ ಸಂಸ್ಥೆಯು ಹೇಗೆ 30 ಬಿಲಿಯನ್ ಡಾಲರ್ ಲಾಭಸಹಿತ ಕಂಪನಿಯಾಯಿತು ಎಂಬುದರ ಬಗ್ಗೆ ನನಗೆ ಇನ್ನೂ ಗೊಂದಲವಿದೆ. ಇದು ಕಾನೂನುಬದ್ಧವಾಗಿದ್ದರೆ, ಎಲ್ಲರೂ ಹೀಗೇ ಮಾಡಬಹುದಲ್ಲ? ಎಂದು ಬರೆದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬುದು ಎಂಬುದು ನಾಗರಿಕತೆಗೆ ಎದುರಾಗಬಹುದಾದ ಅತಿದೊಡ್ಡ ಅಪಾಯಗಳಲ್ಲಿ ಒಂದಾಗಿದೆ ಮತ್ತು ಅದನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಈ ಹಿಂದೆ ಮಸ್ಕ್ ಹೇಳಿದ್ದರು.
ಲಾಭರಹಿತ ಕಂಪನಿಯಾಗಿದ್ದ OpenAI :2015 ರಲ್ಲಿ ಸ್ಯಾಮ್ ಆಲ್ಟ್‌ಮನ್ (ಸದ್ಯ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ), ಎಲೋನ್ ಮಸ್ಕ್, ಲಿಂಕ್ಡ್‌ಇನ್ ಸಹಸ್ಥಾಪಕ ರೀಡ್ ಹಾಫ್‌ಮನ್, ಇತರ ಟೆಕ್ ದಿಗ್ಗಜರು ಸೇರಿಕೊಂಡು OpenAI ಕಂಪನಿಯನ್ನು ಲಾಭರಹಿತ ಸಂಶೋಧನಾ ಸಂಸ್ಥೆಯಾಗಿ ಸ್ಥಾಪಿಸಿದ್ದರು. ಕಂಪನಿ ಸ್ಥಾಪಿಸಿದಾಗ ಅದರ ಧ್ಯೇಯವಾಕ್ಯ ಹೀಗಿತ್ತು- OpenAI ಒಂದು ಲಾಭರಹಿತ ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿಯಾಗಿದೆ. ನಮ್ಮ ಗುರಿಯು ಡಿಜಿಟಲ್ ಬುದ್ಧಿಮತ್ತೆ ಒಟ್ಟಾರೆಯಾಗಿ ಮಾನವಕುಲಕ್ಕೆ ಲಾಭದಾಯಕವಾಗುವ ರೀತಿಯಲ್ಲಿ ಮುನ್ನಡೆಸುವುದು. ಆರ್ಥಿಕ ಲಾಭ ಮಾಡುವ ಅಗತ್ಯತೆ ಇರುವುದಿಲ್ಲ. ನಮ್ಮ ಸಂಶೋಧನೆಯು ಹಣಕಾಸಿನ ಕಟ್ಟುಪಾಡುಗಳಿಂದ ಮುಕ್ತವಾಗಿರುವುದರಿಂದ, ಮಾನವ ಕುಲಕ್ಕೆ ಒಳಿತಾಗುವ ಅಂಶಗಳ ಮೇಲೆ ನಾವು ಉತ್ತಮವಾಗಿ ಗಮನಹರಿಸಬಹುದು.