ಮುಂಬೈ:ಬ್ಯಾಂಕಿಂಗ್ ಮತ್ತು ಇತರ ಹೆವಿವೇಯ್ಟ್ ಷೇರುಗಳಲ್ಲಿನ ಚೇತರಿಕೆಯಿಂದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಏರಿಕೆ ಕಂಡವು. ಬಿಎಸ್ಇ ಸೆನ್ಸೆಕ್ಸ್ 358.79 ಪಾಯಿಂಟ್ಸ್ ಏರಿಕೆಯಾಗಿ 70,865.10 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ-50 104.90 ಪಾಯಿಂಟ್ಸ್ ಏರಿಕೆಯಾಗಿ 21,255.05ಕ್ಕೆ ತಲುಪಿದೆ.
ಪ್ರಮುಖ ವಲಯ ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಕ್ರಮವಾಗಿ ಶೇಕಡಾ 0.8 ಮತ್ತು ಶೇಕಡಾ 0.6 ರಷ್ಟು ಏರಿಕೆ ಕಂಡಿವೆ. ನಿಫ್ಟಿ ಆಯಿಲ್ & ಗ್ಯಾಸ್ ಶೇಕಡಾ 1.73 ರಷ್ಟು ಏರಿಕೆಯಾಗಿದೆ. ನಿಫ್ಟಿ 50 ರಲ್ಲಿ ಪವರ್ ಗ್ರಿಡ್, ಬಿಪಿಸಿಎಲ್, ಬ್ರಿಟಾನಿಯಾ, ಅಪೊಲೊ ಆಸ್ಪತ್ರೆ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಲಾಭ ಗಳಿಸಿದ ಪ್ರಮುಖ ಐದು ಷೇರುಗಳಾಗಿವೆ. ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಚ್ಸಿಎಲ್ ಟೆಕ್ ಮತ್ತು ಸಿಪ್ಲಾ ನಷ್ಟ ಅನುಭವಿಸಿದವು.
ಆರಂಭಿಕ ವಹಿವಾಟಿನಲ್ಲಿ ಬೆಂಚ್ ಮಾರ್ಕ್ ಸೂಚ್ಯಂಕಗಳು ತೀವ್ರವಾಗಿ ಕುಸಿದವು. ಮಧ್ಯಾಹ್ನದವರೆಗೆ ತೀವ್ರ ಏರಿಳಿತ ಕಂಡ ಸೂಚ್ಯಂಕ ಮಧ್ಯಾಹ್ನದ ನಂತರ ಬಲವಾದ ಚೇತರಿಕೆಗೆ ಸಾಕ್ಷಿಯಾಯಿತು. ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು, ವಿದೇಶಿ ಹೂಡಿಕೆದಾರರ ಮಾರಾಟ ಮತ್ತು ಲಾಭದ ಬುಕಿಂಗ್ ನಂತಹ ಹಲವಾರು ಅಂಶಗಳು ನಿನ್ನೆಯಿಂದ ಷೇರು ಮಾರುಕಟ್ಟೆಗಳ ಮೇಲೆ ಒತ್ತಡ ಹೇರಿವೆ.