ಹೈದರಾಬಾದ್: ವೈದ್ಯಕೀಯ ಹಣದುಬ್ಬರ ದಿನೇ ದಿನೆ ಏರಿಕೆಯಾಗುತ್ತಿರುವುದರಿಂದ, ಸಮಗ್ರ ಆರೋಗ್ಯ ವಿಮಾ ಪಾಲಿಸಿ (comprehensive health insurance) ಪಡೆದುಕೊಳ್ಳುವ ಅಗತ್ಯ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಬಹು ವರ್ಷದ ಆರೋಗ್ಯ ವಿಮಾ ಪಾಲಿಸಿಗಳು ಪಾಲಿಸಿದಾರರಿಗೆ ಯಾವುದೇ ತೊಂದರೆಗಳಿಲ್ಲದೇ ಆರೋಗ್ಯ ರಕ್ಷಣೆ ನೀಡುತ್ತವೆ. ನೀವು ಒಂದೇ ಬಾರಿಗೆ ಎರಡರಿಂದ ಮೂರು ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬಹುದು ಮತ್ತು ತಡೆರಹಿತ ಆರೋಗ್ಯ ರಕ್ಷಣೆಯ ಖಾತ್ರಿ ಪಡೆಯಬಹುದು.
ಅನೇಕರು ಪ್ರತಿ ವರ್ಷ ನವೀಕರಿಸಬೇಕಾಗುವ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಮಾ ಕಂಪನಿಗಳು ಬಹು - ವರ್ಷದ, ದೀರ್ಘಾವಧಿಯ ಪಾಲಿಸಿಗಳನ್ನು ನೀಡುತ್ತಿವೆ. ಇದು ಎರಡು ಅಥವಾ ಮೂರು ವರ್ಷಗಳವರೆಗೆ ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವ ಮೂಲಕ ದೀರ್ಘಕಾಲದವರೆಗೆ ಪಾಲಿಸಿ ಕವರೇಜ್ ಖಚಿತಪಡಿಸುತ್ತದೆ. ವಾರ್ಷಿಕ ಪಾಲಿಸಿಯಲ್ಲಿ, ಕವರೇಜ್ ಒಂದು ವರ್ಷದವರೆಗೆ ಮುಂದುವರಿಯುತ್ತದೆ. ನವೀಕರಣ ಮಾಡಿಸಿದರೆ ಮಾತ್ರ ಕವರೇಜ್ ಮುಂದುವರಿಯುತ್ತದೆ. ಆದರೆ ಇದರ ಬದಲಾಗಿ ಬಹುವರ್ಷದ ಪಾಲಿಸಿ ಪಡೆದರೆ ಪದೇ ಪದೆ ನವೀಕರಣದ ಸಮಸ್ಯೆಯನ್ನು ತಪ್ಪಿಸಬಹುದು.
ದುಬಾರಿಯಾದರೂ ಲಾಭಕರ:ವಾರ್ಷಿಕ ಪಾಲಿಸಿಗಳಿಗೆ ಹೋಲಿಸಿದರೆ ದೀರ್ಘಾವಧಿಯ ಪಾಲಿಸಿಗಳಿಗೆ ದೊಡ್ಡ ಮೊತ್ತದ ಹಣ ಪಾವತಿಸಬೇಕಾಗುತ್ತದೆ. ಆದರೂ ಇಂಥ ದೀರ್ಘಾವಧಿಯ ಪಾಲಿಸಿಗಳು ಕೆಲ ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿರುತ್ತವೆ. ಈ ಪಾಲಿಸಿಗಳಲ್ಲಿ ಎರಡು ಅಥವಾ ಮೂರು ವರ್ಷಗಳವರೆಗೆ ಪಾಲಿಸಿದಾರರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಈ ರಿಯಾಯಿತಿ 5-10 ಪ್ರತಿಶತದವರೆಗೆ ಇರುತ್ತದೆ. ವಿಮಾದಾರರನ್ನು ಅವಲಂಬಿಸಿ ಅದು ಬದಲಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಪಾಲಿಸಿದಾರರಿಗೆ ಆರ್ಥಿಕವಾಗಿ ಲಾಭಕರ ಎಂದು ಹೇಳಬಹುದು.
ಹಣವಿದ್ದಾಗ ದೀರ್ಘಾವಧಿ ಪಾಲಿಸಿಗಳನ್ನ ಕೊಳ್ಳಬಹುದು:ಹೆಚ್ಚುತ್ತಿರುವ ವೈದ್ಯಕೀಯ ಚಿಕಿತ್ಸಾ ವೆಚ್ಚಗಳ ಕಾರಣ, ವಿಮಾ ಕಂಪನಿಗಳು ಪ್ರತಿ ವರ್ಷ ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂಗಳನ್ನು ಹೆಚ್ಚಿಸುತ್ತಿವೆ. ಎರಡು ಅಥವಾ ಮೂರು ವರ್ಷಗಳ ಅವಧಿಯ ಪಾಲಿಸಿಗಳಲ್ಲಿ, ಪ್ರೀಮಿಯಂ ಮೊತ್ತವನ್ನು ಮುಂಗಡವಾಗಿ ಪಾವತಿಸಲಾಗುತ್ತದೆ. ಆದ್ದರಿಂದ, ಪಾಲಿಸಿದಾರನು ಅಂತಹ ಹಣದುಬ್ಬರದ ಪ್ರೀಮಿಯಂ ಹೆಚ್ಚಳದಿಂದ ರಕ್ಷಿಸಲ್ಪಡುತ್ತಾನೆ.
ಅನಿರೀಕ್ಷಿತ ಆದಾಯದ ನಷ್ಟ, ಅನಾರೋಗ್ಯದಂತಹ ನಿರ್ಣಾಯಕ ಸಂದರ್ಭಗಳ ಕಾರಣದಿಂದ ಕೆಲಬಾರಿ ಪ್ರೀಮಿಯಂ ಪಾವತಿ ಸಾಧ್ಯವಾಗದಿರಬಹುದು. ಅಂಥ ಸಂದರ್ಭಗಳನ್ನು ತಪ್ಪಿಸಲು ನಿಮ್ಮ ಬಳಿ ಹಣವಿರುವಾಗ ನೀವು ದೀರ್ಘಾವಧಿಯ ಪಾಲಿಸಿಗಳನ್ನು ಕೊಳ್ಳಬಹುದು.