ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆಯು 2015 ರಲ್ಲಿ ಪ್ರಾರಂಭವಾದಾಗಿನಿಂದ 40.82 ಕೋಟಿ ಸಾಲ ಖಾತೆಗಳ ಮೂಲಕ ಸುಮಾರು 23.2 ಲಕ್ಷ ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಯೋಜನೆಯ ಅಡಿಯಲ್ಲಿ ಸುಮಾರು 68 ಪ್ರತಿಶತ ಖಾತೆಗಳು ಮಹಿಳಾ ಉದ್ಯಮಿಗಳಿಗೆ ಸೇರಿವೆ ಮತ್ತು 51 ಪ್ರತಿಶತ ಖಾತೆಗಳು ಎಸ್‌ಸಿ / ಎಸ್‌ಟಿ ಮತ್ತು ಒಬಿಸಿ ವರ್ಗಗಳ ಉದ್ಯಮಿಗಳಿಗೆ ಸೇರಿವೆ. ಮುದ್ರಾ ಯೋಜನೆಯು ದೇಶದ ಉದಯೋನ್ಮುಖ ಉದ್ಯಮಿಗಳಿಗೆ ಸುಲಭವಾಗಿ ಸಾಲ ಲಭ್ಯತೆಗೆ ಕಾರಣವಾಗಿದೆ ಮತ್ತು ಇದರಿಂದ ತಲಾ ಆದಾಯದಲ್ಲಿ ನಿರಂತರ ಹೆಚ್ಚಳವಾಗಿದೆ ಎಂದು ಯೋಜನೆಯ ಎಂಟನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಚಿವೆ ಸೀತಾರಾಮನ್ ಹೇಳಿದರು.
ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, 2015 ರಂದು ಪ್ರಾರಂಭಿಸಿದ್ದರು. ಮುದ್ರಾ ಇದು ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ 10 ಲಕ್ಷದವರೆಗೆ ಸುಲಭವಾಗಿ ಯಾವುದೇ ಭದ್ರತೆ ಜಾಮೀನು ಇಲ್ಲದ ಸಾಲ ನೀಡುವ ಯೋಜನೆಯಾಗಿದೆ. ಎಂಎಸ್‌ಎಂಇಗಳ ಮೂಲಕ ಸ್ಥಳೀಯ ಬೆಳವಣಿಗೆಯನ್ನು ಉಲ್ಲೇಖಿಸಿದ ಹಣಕಾಸು ಸಚಿವರು, ಎಂಎಸ್‌ಎಂಇಗಳ ಬೆಳವಣಿಗೆಯು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಭಾರಿ ಕೊಡುಗೆ ನೀಡಿದೆ. ದೃಢವಾದ ದೇಶೀಯ ಎಂಎಸ್‌ಎಂಇಗಳು ದೇಶೀಯ ಮಾರುಕಟ್ಟೆಗಳಿಗೆ ಮತ್ತು ರಫ್ತುಗಳಿಗೆ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗಿವೆ ಎಂದರು.
ಪಿಎಂಎಂವೈ ಯೋಜನೆಯು ತಳಮಟ್ಟದಲ್ಲಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳ ಸೃಷ್ಟಿಗೆ ಸಹಾಯ ಮಾಡಿದೆ ಮತ್ತು ಭಾರತೀಯ ಆರ್ಥಿಕತೆಯನ್ನು ಉತ್ತೇಜಿಸುವ ಜೊತೆಗೆ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡಿದೆ ಎಂದು ಅವರು ಹೇಳಿದರು.