ನವದೆಹಲಿ: ದೇಶದ ದಿಗ್ಗಜ ಐಟಿ ಕಂಪನಿ ವಿಪ್ರೊ, ಮೂನ್ಲೈಟಿಂಗ್ನಲ್ಲಿ ತೊಡಗಿದ್ದ ತನ್ನ 300 ಜನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತ, ಆ ಕೆಲಸದ ಅವಧಿಯ ನಂತರ ಮತ್ತೊಂದು ಕಂಪನಿಗೆ ಕಂಪನಿಗೆ ಕೆಲಸ ಮಾಡುವುದನ್ನು ಮೂನ್ಲೈಟಿಂಗ್ ಎಂದು ಕರೆಯಲಾಗುತ್ತದೆ.
ಮೂನ್ಲೈಟಿಂಗ್ ಸಂಸ್ಕೃತಿಯ ಬದ್ಧ ವಿರೋಧಿಯಾಗಿರುವ ವಿಪ್ರೊ ಚೇರ್‌ಮನ್ ರಿಷದ್ ಪ್ರೇಮ್ ಜಿ, ನಮ್ಮ ಕಂಪನಿಯ ನೌಕರರಾಗಿದ್ದುಕೊಂಡು ಪ್ರತಿಸ್ಪರ್ಧಿ ಕಂಪನಿಗೂ ಕೆಲಸ ಮಾಡುವವರಿಗೆ ನಮ್ಮ ಕಂಪನಿಯಲ್ಲಿ ಯಾವುದೇ ಜಾಗವಿಲ್ಲ ಎಂದು ಖಡಕ್ ನಿಲುವು ತಾಳಿದ್ದಾರೆ.
ಮೂನ್ಲೈಟಿಂಗ್ ಇದು ವಿಶ್ವಾಸಾರ್ಹತೆಯ ತೀವ್ರವಾದ ಕುಸಿತವಾಗಿದೆ ಎಂದು AIMA ಸಮಾವೇಶದಲ್ಲಿ ರಿಷದ್ ಹೇಳಿದರು. ವಿಪ್ರೊಗೆ ಹಾಗೂ ಅದೇ ಸಮಯದಲ್ಲಿ ನಮ್ಮ ಪ್ರತಿಸ್ಪರ್ಧಿ ಕಂಪನಿಯೊಂದಿಗೆ ನೇರವಾಗಿ ಕೆಲಸ ಮಾಡುವ 300 ಜನರನ್ನು ಕಳೆದ ಕೆಲ ತಿಂಗಳುಗಳಲ್ಲಿ ನಾವು ಕಂಡುಹಿಡಿದಿದ್ದೇವೆ. ಆ 300 ಜನ ಉದ್ಯೋಗಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ, ಸೇವಾ ನಿಯಮಗಳನ್ನು ಉಲ್ಲಂಘಿಸಿದ ಅಂಥ ಪ್ರಕರಣಗಳಲ್ಲಿ ಉದ್ಯೋಗಿಗಳ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.
ನಿಯಮಿತವಾದ ಕೆಲಸದ ನಂತರ ಉದ್ಯೋಗಿಗಳು ಮತ್ತೊಂದು ಕೆಲಸ ಮಾಡುವುದರಿಂದ ಉತ್ಪಾದಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತವೆ ಕೆಲ ಐಟಿ ಕಂಪನಿಗಳು. ಇದರಿಂದ ಹಿತಾಸಕ್ತಿ ಸಂಘರ್ಷ ಉಂಟಾಗುತ್ತದೆ ಮತ್ತು ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳಿರುತ್ತವೆ ಎಂದು ಅವು ಆತಂಕ ವ್ಯಕ್ತಪಡಿಸುತ್ತವೆ.