ನವದೆಹಲಿ: ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸ್ ಶುಕ್ರವಾರ 2023ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ 6.7ಕ್ಕೆ ಏರಿಸಿದೆ. "ಸೇವೆಗಳ ವಿಸ್ತರಣೆಯಲ್ಲಿನ ಹೆಚ್ಚಳ ಮತ್ತು ಬಂಡವಾಳ ವೆಚ್ಚಗಳ ಕಾರಣದಿಂದ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ನೈಜ ಜಿಡಿಪಿ ಬೆಳವಣಿಗೆಯು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 7.8 ಕ್ಕೆ ಏರಿಕೆಯಾಗಿದೆ. ಅದರಂತೆ ನಾವು ಭಾರತದ 2023 ಕ್ಯಾಲೆಂಡರ್ ವರ್ಷದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 5.5 ರಿಂದ 6.7 ಕ್ಕೆ ಹೆಚ್ಚಿಸಿದ್ದೇವೆ" ಎಂದು ಮೂಡೀಸ್ ತನ್ನ ಗ್ಲೋಬಲ್ ಮ್ಯಾಕ್ರೋ ಔಟ್ಲುಕ್ನಲ್ಲಿ ತಿಳಿಸಿದೆ.
"ದೃಢವಾದ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ, ಭಾರತದ ಆರ್ಥಿಕ ಬೆಳವಣಿಗೆಯ ಕಾರ್ಯಕ್ಷಮತೆಗೆ ಮೇಲ್ಮಟ್ಟದಲ್ಲಿ ಮತ್ತಷ್ಟು ಅಪಾಯವಿರುವುದನ್ನು ನಾವು ಗುರುತಿಸಿದ್ದೇವೆ. ಎರಡನೇ ತ್ರೈಮಾಸಿಕದ ಕಾರ್ಯಕ್ಷಮತೆಯು 2023 ರಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದರಿಂದ, 2024 ರ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.5 ರಿಂದ 6.1 ಕ್ಕೆ ಇಳಿಸಿದ್ದೇವೆ" ಎಂದು ಮೂಡೀಸ್ ಹೇಳಿದೆ.
ಜೂನ್ನಿಂದ ಅಕ್ಟೋಬರ್ವರೆಗೆ ಮುಂದುವರಿಯುವ ಭಾರತದ ಮಾನ್ಸೂನ್ ಋತುವಿನಲ್ಲಿ ಸರಾಸರಿಗಿಂತ ಕಡಿಮೆ ಮಳೆಯಾಗಬಹುದು. ಇದರ ಪರಿಣಾಮದಿಂದ ಆಹಾರ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ಪ್ರಸ್ತುತ ಆಗಸ್ಟ್ 29 ರವರೆಗೆ ಭಾರತೀಯ ಹವಾಮಾನ ಇಲಾಖೆ ದೇಶಾದ್ಯಂತ ಶೇಕಡಾ 9 ರಷ್ಟು ಮಳೆ ಕೊರತೆಯಾಗಿರುವುದನ್ನು ಅಂದಾಜಿಸಿದೆ. ಈ ವರ್ಷ ಎಲ್ ನಿನೊ ವಿಶೇಷವಾಗಿ 2023 ರ ದ್ವಿತೀಯಾರ್ಧ ಮತ್ತು 2024 ರ ಆರಂಭದಲ್ಲಿ ಪ್ರಬಲವಾಗಿದ್ದರೆ ಕೃಷಿ ಸರಕುಗಳ ಬೆಲೆಗಳು ಹೆಚ್ಚಾಗಬಹುದು ಎಂದು ಮೂಡೀಸ್ ತಿಳಿಸಿದೆ.