ನವದೆಹಲಿ :ಸದ್ಯದ ಪರಿಸ್ಥಿತಿಯಲ್ಲಿ ದುರ್ಬಲ ಮುಂಗಾರು ದೇಶದ ಕೃಷಿ ಮತ್ತು ಆರ್ಥಿಕ ವಲಯಕ್ಕೆ ಪ್ರಮುಖ ಚಿಂತೆಯ ಕಾರಣವಾಗಿದೆ ಹಾಗೂ ಒಂದೊಮ್ಮೆ ಮುಂಗಾರು ದುರ್ಬಲವಾಗಿಯೇ ಮುಂದುವರೆದಲ್ಲಿ ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, 36 IMD ಉಪವಿಭಾಗಗಳ ಪೈಕಿ 29 ವಿಭಾಗಗಳಲ್ಲಿ ಮಳೆಯ ಕೊರತೆಯಿದೆ ಎಂದು ವರದಿಯಾಗಿದೆ. ಆದಾಗ್ಯೂ ಇವು ಮುಂಗಾರಿನ ಆರಂಭಿಕ ದಿನಗಳಾಗಿದ್ದು, ಬರುವ ವಾರಗಳಲ್ಲಿ ಉತ್ತಮ ಮುಂಗಾರು ಈ ಕೊರತೆಯನ್ನು ನೀಗಿಸಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಲಾಗಿದೆ.
ಈ ವರ್ಷ ಎಲ್ ನಿನೋ ವಿದ್ಯಮಾನವು ಮಾನ್ಸೂನ್ ಮೇಲೆ ಪರಿಣಾಮ ಬೀರಬಹುದು ಎಂಬುದು ಆತಂಕಕಾರಿಯಾಗಿದೆ. ಇದು ಸಂಭವಿಸಿದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮವಾಗಲಿದೆ ಮತ್ತು ಆಹಾರ ಹಣದುಬ್ಬರ ಹೆಚ್ಚಾಗಲಿದೆ. ಜೊತೆಗೆ ಇದು ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ ಮುಂಗಾರು ಮಳೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ವಿಶ್ಲೇಷಕ ವಿಕೆ ವಿಜಯಕುಮಾರ್ ತಿಳಿಸಿದರು.
ಭಾರತೀಯ ಹವಾಮಾನ ಇಲಾಖೆಯು ಈಗಲೂ ಸಾಮಾನ್ಯ ಮಳೆಯಾಗಲಿದೆ ನಿರೀಕ್ಷೆಯಲ್ಲಿದ್ದರೂ, ಹಿಂದಿನ ಮಾಹಿತಿಯನ್ನು ನೋಡಿದರೆ ಕೊರತೆ ಮುಂಗಾರು ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇದು ಭಾರತದ ಕೃಷಿ ಮತ್ತು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪ್ರಭುದಾಸ್ ಲೀಲಾಧರ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಅಮ್ನಿಶ್ ಅಗರ್ವಾಲ್ ಹೇಳಿದ್ದಾರೆ.
ಎಲ್ ನಿನೋ ದೊಡ್ಡ ಅಪಾಯವಾಗಿ ಉಳಿದಿದ್ದರೂ ಗ್ರಾಮೀಣ ಭಾಗದಲ್ಲಿನ ಸರಕು ಬೇಡಿಕೆಯು ಬಲವಾದ ರಾಬಿ ಬೆಳೆ ಮತ್ತು ಇಳಿಮುಖವಾದ ಹಣದುಬ್ಬರದ ನಂತರ ಕ್ರಮೇಣ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಅಗರ್ವಾಲ್ ಹೇಳಿದರು. ಆಟೋ, ಬ್ಯಾಂಕ್‌ಗಳು, ಬಂಡವಾಳ ಸರಕುಗಳು, ಆಸ್ಪತ್ರೆಗಳು, ಬಳಕೆ ಮತ್ತು ಕಟ್ಟಡ ಸಾಮಗ್ರಿಗಳ ವಲಯದ ಬಗ್ಗೆ ಆಶಾವಾದಿಗಳಾಗಿದ್ದೇವೆ. ಆದರೆ ಎಲ್ ನಿನೋ ಮತ್ತು ಅದರ ಪರಿಣಾಮವಾಗಿ ಹಣದುಬ್ಬರ ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಕಳವಳ ಇದೆ ಎಂದು ಅವರು ತಿಳಿಸಿದರು.