ಕರ್ನಾಟಕ

karnataka

ETV Bharat / business

11 ಸಾವಿರ ಉದ್ಯೋಗಿಗಳ ವಜಾಗೊಳಿಸಲು ಮುಂದಾದ ಟೆಕ್​ ದೈತ್ಯ ಮೈಕ್ರೋಸಾಫ್ಟ್​​

ಅಮೆಜಾನ್​, ಮೆಟಾ ಬೆನ್ನಲ್ಲೇ ಉದ್ಯೋಗ ಕಡಿತಕ್ಕೆ ಮೈಕ್ರೋಸಾಫ್ಟ್​ ಮುಂದಾಗಿದೆ. ಸಂಸ್ಥೆಯ 11 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

11 ಸಾವಿರ ಉದ್ಯೋಗಿಗಳ ವಜಾಕ್ಕೆ ಮುಂದಾದ ಟೆಕ್​ ದೈತ್ಯ ಮೈಕ್ರೋಸಾಫ್ಟ್​​
microsoft-to-lay-off-11-thousand-employees

By

Published : Jan 18, 2023, 1:19 PM IST

ವಾಷಿಂಗ್ಟನ್​: ಆರ್ಥಿಕ ಹಿಂಜರಿತದಿಂದ ಅಮೆರಿಕದ ದೊಡ್ಡ ದೊಡ್ಡ ಟೆಕ್​ ಕಂಪನಿಗಳಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಮುಂದುವರೆದಿದ್ದು, ದಿನವೊಂದಕ್ಕೆ 1600 ಮಂದಿ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪಟ್ಟಿಗೆ ಇದೀಗ ಮೈಕ್ರೋಸಾಫ್ಟ್​ ಕೂಡ ಸೇರಿಕೊಂಡಿದೆ. ಟೆಕ್​ ದೈತ್ಯ ಸಂಸ್ಥೆ​ಯು ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು​ ವರದಿ ಮಾಡಿವೆ. ಮೈಕ್ರೋಸಾಫ್ಟ್​​ ತಮ್ಮ ಸಂಸ್ಥೆಯಲ್ಲಿ ಸರಿಸುಮಾರು ಶೇ 5ರಷ್ಟು ಅಥವಾ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

ಸಂಸ್ಥೆಯ ಮಾನವ ಸಂಪನ್ಮೂಲ ಮತ್ತು ಇಂಜಿನಿಯರಿಂಗ್​ ವಿಭಾಗದಲ್ಲಿ ಬುಧವಾರ ಸಾವಿರಾರು ಜನರು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ನಡೆಯುತ್ತಿರುವ ಹೊಸ ಉದ್ಯೋಗ ವಜಾ ಪ್ರಕರಣವಿದು. ಈಗಾಗಲೇ ಅಮೆಜಾನ್​, ಮೆಟಾದಂತಹ ಸಂಸ್ಥೆಗಳು ಬೇಡಿಕೆ ಕುಗ್ಗುವಿಕೆ ಮತ್ತು ಜಾಗತಿಕ ಆರ್ಥಿಕತೆ ಕುಸಿತದಿಂದಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಅನಿವಾರ್ಯವಾಗಿದೆ ಎಂದು ಪ್ರಕಟಿಸಿ, ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದವು.

ಮಾರುಕಟ್ಟೆ ಕುಸಿತ: ಜೂನ್​ 30ರ ವರದಿ ಅನುಸಾರ, ಮೈಕ್ರೋಸಾಫ್ಟ್​ ಸಂಸ್ಥೆಯಲ್ಲಿ 221,000 ಮಂದಿ ಪೂರ್ಣ ಪ್ರಮಾಣದ ಉದ್ಯೋಗಿಗಳಿದ್ದಾರೆ. ಇದರಲ್ಲಿ ಅಮೆರಿಕದಲ್ಲಿ 122,000 ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, 99,000 ಮಂದಿ ಅಂತಾರಾಷ್ಟ್ರೀಯ ಮಟ್ಟದ ಉದ್ಯೋಗಿಗಳಾಗಿದ್ದಾರೆ. ಮೈಕ್ರೋಸಾಫ್ಟ್​​ ತಮ್ಮ ಕ್ಲೌಡ್​ ಯೂನಿಟ್​ ಅಜುರ್​ ಬೆಳವಣಿಗೆ ನಿರ್ವಹಣೆ ಒತ್ತಡದಲ್ಲಿ ಸಿಲುಕಿದೆ. ಅಲ್ಲದೇ, ಮಾರುಕಟ್ಟೆಯ ಕ್ವಾರ್ಟರ್​ನಲ್ಲಿ ಕುಸಿತದ ನಂತರ ವಿಂಡೋಸ್​ ಮತ್ತು ಸಾಧನಗಳ ಮಾರಾಟ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಅನಿವಾರ್ಯವಾಗಿದೆ ಎನ್ನಲಾಗಿದೆ.

ರಜೆ ನೀತಿ ಜಾರಿಗೆ ತಂದಿದ್ದ ಸಂಸ್ಥೆ: ಕಳೆದ ಜುಲೈನಲ್ಲಿ ಸಂಸ್ಥೆ, ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ತೆಗೆದು ಹಾಕುವುದಾಗಿ ತಿಳಿಸಿತ್ತು. ಅಕ್ಟೋಬರ್​ನಲ್ಲಿ ಮೈಕ್ರೋಸಾಫ್ಟ್​ನ ಹಲವಾರು ವಲಯದಲ್ಲಿ ಸುಮಾರು 1000 ಉದ್ಯೋಗಿಗಳನ್ನು ಕೆಲಸದಿಂದ ಸಂಸ್ಥೆ ವಜಾ ಮಾಡಿತ್ತು ಎಂದು ವರದಿಯಾಗಿತ್ತು. ಮೈಕ್ರೋಸಾಫ್ಟ್​ನ ಷೇರುಗಳ ಕ್ವಾರ್ಟಲಿ ವರದಿ ಇದೇ ಜನವರಿ 24ರಂದು ಪ್ರಕಟಗೊಳ್ಳಲಿದೆ. ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಕಡಿತಕ್ಕೆ ಮೈಕ್ರೋಸಾಫ್ಟ್‌ ಮುಂದಾಗಿದೆ. ಆರ್ಥಿಕತೆಯಲ್ಲಿ ತೀವ್ರ ಸವಾಲು ಎದುರಿಸುತ್ತಿರುವ ಮೈಕ್ರೋಸಾಫ್ಟ್​ ಇತ್ತೀಚೆಗಷ್ಟೇ ತನ್ನ ಉದ್ಯೋಗಿಗಳಿಗೆ ಅನಿಯಮಿತ ಕೆಲಸದ ಸಮಯ ನಿಯಮ ಜಾರಿಗೆ ತಂದಿತ್ತು. ಇದರ ಅನುಸಾರ ಸಂಸ್ಥೆಯ ಉದ್ಯೋಗಿಗಳು ಬಳಕೆಯಾಗದ ರಜೆ ಬಾಕಿ ಹೊಂದಿರುವವರು ಏಪ್ರಿಲ್​ನಲ್ಲಿ ಒಂದು ಬಾರಿ ಪಾವತಿಯನ್ನು ಪಡೆಯಬಹುದು ಎಂದು ತಿಳಿಸಲಾಗಿತ್ತು.

ಮುಂದಿನ ಎರಡು ವರ್ಷ ಭಾರಿ ಸವಾಲು: ತಂತ್ರಜ್ಞಾನ ವಲಯದಲ್ಲಿ ಮುಂದಿನ ಎರಡು ವರ್ಷದ ಸವಾಲಿನ ಕುರಿತು ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉದ್ಯೋಗಿಗಳ ವಜಾ ಪ್ರಕ್ರಿಯೆ ಸಂಸ್ಥೆಯಲ್ಲಿ ನಡೆದಿದೆ. ಇತ್ತೀಚೆಗೆ, ಸಿಎನ್​ಬಿಸಿ ಸಂದರ್ಶನದಲ್ಲಿ ಮಾತನಾಡಿದ ನಾದೆಲ್ಲಾ, ಮುಂದಿನ ಎರಡು ವರ್ಷ ಬಹು ಸವಾಲಿನ ವರ್ಷವಾಗಿರಲಿದ್ದು, ಟೆಕ್​ ಸಂಸ್ಥೆಗಳು ದಕ್ಷವಾಗಿರಬೇಕು ಎಂದು ತಿಳಿಸಿದ್ದರು.

ಇದನ್ನೂ ಓದಿ: ಡಬ್ಲ್ಯುಇಎಫ್‌ನ ಟಾಪ್ 30 ಪ್ರಭಾವಿಗಳ ಪಟ್ಟಿಯಲ್ಲಿ ಕೆಟಿಆರ್; ಎಎಪಿ ನಾಯಕ ರಾಘವ್ ಚಡ್ಡಾಗೂ ಸ್ಥಾನ

ABOUT THE AUTHOR

...view details