ನವದೆಹಲಿ: ಭಾರತೀಯ ಕೈಗಾರಿಕಾ ಹಣಕಾಸು ನಿಗಮಕ್ಕೆ (ಐಎಫ್‌ಸಿಐ) ವಂಚಿಸಿದ ಆರೋಪದ ಮೇಲೆ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಮತ್ತು ಅವರ ಕಂಪನಿ ಗೀತಾಂಜಲಿ ಜೆಮ್ಸ್ ವಿರುದ್ಧ ಹೊಸ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ತಿಳಿಸಿದೆ. 2014-18ರ ನಡುವೆ ಉದ್ಯಮಿ ಮೆಹುಲ್ ಚೋಕ್ಸಿ ಸುಮಾರು 22 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) 13,500 ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿಗೆ ಭಾರತದಲ್ಲಿ ಚೋಕ್ಸಿ ಮೋಸ್ಟ್ ವಾಂಟೆಡ್ ಆಗಿದ್ದಾರೆ. ಕಳೆದ ವರ್ಷ ಮೇ 23 ರಂದು ಡೊಮಿನಿಕಾದಿಂದ ಚೋಕ್ಸಿ ನಾಪತ್ತೆಯಾಗಿದ್ದರು. ಬಳಿಕ ಮೇ 26 ರಂದು ಡೊಮಿನಿಕಾದಲ್ಲಿಯೇ ಅವರನ್ನು ಸೆರೆಹಿಡಿಯಲಾಗಿತ್ತು. ಚೋಕ್ಸಿಯ ವಕೀಲರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ನ್ನು ಆಲಿಸಿದ ನಂತರ ಡೊಮಿನಿಕನ್ ನ್ಯಾಯಾಲಯವು ಅವರನ್ನು ಗಡಿಪಾರು ಮಾಡುವುದನ್ನು ತಡೆಯಿತು.