ನವದೆಹಲಿ: ಇಂದಿನಿಂದ ಕೆಲ ವಲಯಗಳಲ್ಲಿ ಬದಲಾವಣೆಯಾಗಲಿವೆ. ನಗದು ವಹಿವಾಟು ನಿಯಮ, ಐಟಿ ರಿಟರ್ನ್ಗೆ ದಂಡ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ, ಬ್ಯಾಂಕ್ ಆಫ್ ಬರೋಡಾದ ಚೆಕ್ಗಳಿಗೆ ಸಂಬಂಧಿಸಿದ ನಿಯಮಗಳು ಪರಿಷ್ಕರಣೆಯಾಗಲಿವೆ. ಈ ಎಲ್ಲಾ ನಿಯಮಗಳು ಇಂದಿನಿಂದಲೇ ಜಾರಿಗೆ ಬರಲಿವೆ.
ಎಲ್‌ಪಿಜಿ ದರ ಇಳಿಕೆ:ಇಂದಿನಿಂದ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಅಗ್ಗವಾಗಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 36 ರೂಪಾಯಿ ಕಡಿತಗೊಳಿಸಿದೆ. ಪ್ರತಿ ಸಿಲಿಂಡರ್ 1976.50 ರೂ. ಸಿಗಲಿದೆ. ಈ ಹಿಂದೆ ಅದರ ಬೆಲೆ 2012.50 ರೂ. ಇತ್ತು.
ಪ್ರತಿ ತಿಂಗಳ 1 ನೇ ತಾರೀಖಿನಂದೇ ದರ ಪರಿಷ್ಕರಣೆ ಮಾಡಲಾಗುತ್ತದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 50 ರೂ. ಹೆಚ್ಚಿಸಲಾಗಿತ್ತು.
ಬಿಒಬಿ ಚೆಕ್ ಪಾವತಿ ನಿಯಮ ಬದಲು:ಬ್ಯಾಂಕ್ ಆಫ್ ಬರೋಡಾ ಇಂದಿನಿಂದ ದೊಡ್ಡ ಬದಲಾವಣೆಗೆ ಅಣಿಯಾಗಲಿದೆ. ಚೆಕ್ ಪಾವತಿ ಪಾವತಿ ಮಾಡುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಅನ್ವಯ ತನ್ನ ಗ್ರಾಹಕರಿಗೆ ಇಂದಿನಿಂದ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ಪಾವತಿಗಳಿಗೆ ಧನಾತ್ಮಕ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಇದರಡಿ ಚೆಕ್ ನೀಡುವವರು ಎಸ್‌ಎಂಎಸ್, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬ್ಯಾಂಕ್‌ಗೆ ನೀಡಬೇಕಾಗುತ್ತದೆ. ಆಗ ಮಾತ್ರ ಚೆಕ್ ಕ್ಲಿಯರ್ ಆಗುತ್ತದೆ.
ಐಟಿಆರ್ಗೆ ದಂಡದ ಬರೆ:ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ಇಂದಿನಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ದಂಡ ಬೀಳಲಿದೆ. ಈ ಬಾರಿ ಗಡುವನ್ನು ವಿಸ್ತರಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಗಡುವು ಮೀರಿ ರಿಟರ್ನ್ಸ್ ಸಲ್ಲಿಕೆಗೆ 5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯದ ಮೇಲೆ 1,000 ರೂಪಾಯಿ ದಂಡ ಬಿದ್ದರೆ, 5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ 5 ಸಾವಿರದಿಂದ 10 ಸಾವಿರ ರೂ. ದಂಡ ಹಾಕಲಾಗುತ್ತದೆ.
ಓದಿ:ಗುಡ್ ನ್ಯೂಸ್.. ವಾಣಿಜ್ಯ ಸಿಲಿಂಡರ್‌ಗಳ ದರ ಇಳಿಕೆ, ಎಷ್ಟು ಗೊತ್ತಾ?