ಹೈದರಾಬಾದ್: ಸಂದೇಹವೇ ಇಲ್ಲ, ಕ್ಯಾನ್ಸರ್ ಎನ್ನುವ ಹೆಸರಿಗೇನೆ ಜನ ಹೆದರುತ್ತಾರೆ. ಅದಕ್ಕೆ ಸರಿಯಾಗಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಕೂಡ ಬಹಳಷ್ಟು ಹೆಚ್ಚಾಗುತ್ತಿದೆ. ರೋಗದ ಭಯದ ಜೊತೆ ಅದಕ್ಕೆ ಮಾಡಬೇಕಾದ ಖರ್ಚಿನ ಬಗ್ಗೆಯೂ ಭಯ ಪ್ರಾರಂಭವಾಗುತ್ತದೆ. ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಏನಾಗಬಹುದು ಎಂಬುದೇ ಎಲ್ಲರ ಭಯವಾಗಿರುತ್ತದೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಲ್ಲರಿಗೂ ಕ್ಯಾನ್ಸರ್ ಚಿಕಿತ್ಸೆಗೆ ತಗುಲುವ ಖರ್ಚು ಭರಿಸುವ ಸಾಮರ್ಥ್ಯ ಇರುವುದಿಲ್ಲ. ಪ್ರಸ್ತುತವಾಗಿ ಕ್ಯಾನ್ಸರ್ ಚಿಕಿತ್ಸೆ ಸುಲಭವಾಗಿ ಕೈಗೆಟಕುವಂತಿರುವುದಿಲ್ಲ. ಕೆಲವೊಮ್ಮೆ ವಿಮಾ ಪಾಲಿಸಿಗಳೂ ಕ್ಯಾನ್ಸರ್ನ ಸಂಪೂರ್ಣ ವೆಚ್ಚವನ್ನು ಸಂಪೂರ್ಣವಾಗಿ ಸರಿದೂಗಿಸಲು ಸಾಧ್ಯವಾಗುವುದಿಲ್ಲ. ಕ್ಯಾನ್ಸರ್ಗಾಗಿಯೇ ನಿರ್ದಿಷ್ಟ ಪಾಲಿಸಿಗಳನ್ನು ಮಾಡಿಕೊಳ್ಳಲು ಇದು ಸರಿಯಾದ ಸಮಯ.
ಕ್ಯಾನ್ಸರ್ ಚಿಕಿತ್ಸೆಗೆ ಸುಮಾರು 20 ಲಕ್ಷ ರುಪಾಯಿ ಖರ್ಚಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ಮೆಟ್ರೋ ನಗರ ಹಾಗೂ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಈ ವೆಚ್ಚು ಇನ್ನೂ ದುಬಾರಿಯಾಗಬಹುದು. ಕ್ಯಾನ್ಸರ್ ಪತ್ತೆಯಾದ ನಂತರ ಮಾಡುವ ವಿವಿಧ ಪರೀಕ್ಷೆಗಳ ವೆಚ್ಚವೇ ಲಕ್ಷಕ್ಕೆ ಹೋಗಬಹುದು. ಕ್ಯಾನ್ಸರ್ಗೆ ದೀರ್ಘಾವಧಿಯ ಔಷಧ ಮಾಡಬೇಕಾಗುತ್ತದೆ. ಆ ಔಷಧದ ಖರ್ಚೂ ಇದರೊಂದಿಗೆ ಸೇರುತ್ತದೆ.
ಇದೆಲ್ಲವೂ ಖಂಡಿತವಾಗಿಯೂ ನಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಭಾರವಾಗುತ್ತದೆ. ನಾವು ಮಾಡುತ್ತಿರುವ ಉಳಿತಾಯ ಕಡಿಮೆ ಮಾಡುವುದಲ್ಲದೆ, ನಮ್ಮ ಭವಿಷ್ಯದ ಆರ್ಥಿಕ ಗುರಿಗಳ ಮೇಲೂ ನಾವು ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಕಠಿನ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು, ಸಮಗ್ರ ಆರೋಗ್ಯ ವಿಮಾ ಪಾಲಿಸಿಯೊಂದಿಗೆ ಕ್ಯಾನ್ಸರ್ ಸ್ಪೆಷಲ್ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಕ್ಯಾನ್ಸರ್ ವಿಶೇಷ ಪಾಲಿಸಿ ಮಾಡಿಕೊಳ್ಳಿ:ಈಗಾಗಲೇ ನಿಮ್ಮಲ್ಲಿರುವ ಪಾಲಿಸಿ, ಕ್ಯಾನ್ಸರ್ನ ಎಲ್ಲಾ ವ್ಯಾಪ್ತಿಯನ್ನು ಕವರ್ ಮಾಡದೇ ಇದ್ದರೆ, ಕ್ಯಾನ್ಸರ್ ವಿಶೇಷ ಪಾಲಿಸಿ ಅಥವಾ ಎಲ್ಲಾ ಅನಾರೋಗ್ಯವನ್ನು ಕವರ್ ಮಾಡುವಂತಹ ಆರೋಗ್ಯ ವಿಮಾ ಪಾಲಿಸಿ ಖರೀದಿಸುವುದು ಉತ್ತಮ. ಚಿಕಿತ್ಸಾ ವೆಚ್ಚಗಳಲ್ಲದೆ, ಚಿಕಿತ್ಸೆಗಾಗಿ ಪ್ರಯಾಣ, ಪೂರಕ ಔಷಧಗಳ ವೆಚ್ಚಗಳು ಇತ್ಯಾದಿ ಸೇರಿದಂತೆ ವೈದ್ಯಕೀಯೇತರ ವೆಚ್ಚಗಳಂತಹ ಇತರ ಸಂಬಂಧಿತ ವೆಚ್ಚಗಳನ್ನು ಸಹ ಕವರ್ ಮಾಡುವಂತಹ ಪಾಲಿಸಿಗಳು ಸಹಾಯಕವಾಗಿರುತ್ತವೆ.