ಬೆಂಗಳೂರು:ಭಾರತೀಯ ಆಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಅಮೆಜಾನ್ ಇಂಡಿಯಾ ಮೇಡ್ ಇನ್ ಇಂಡಿಯಾ ಎಂಬ ಹೊಸ ಆಟಿಕೆಗಳ ಹೊಸ ಸೇವೆ ಆರಂಭಿಸಿದೆ.
'ಮೇಡ್ ಇನ್ ಇಂಡಿಯಾ' ಆಟಿಕೆ ಅಂಗಡಿ, ಸ್ಥಳೀಯ ಪಾರಂಪರಿಕ ಆಟಿಕೆ ತಯಾರಕರಿಗೆ ಮಾರುಕಟ್ಟೆಯಲ್ಲಿ ಚೀನಾ ಆಟಿಕೆಗಳ ಪ್ರಭಾವವನ್ನು ತಡೆಯಲು ಸಹಾಯ ಮಾಡಲಿದೆ. ಸಾವಿರಾರು ಆಟಿಕೆ ತಯಾರಕರು ಮತ್ತು ಮಾರಾಟಗಾರರಿಗೆ ತಮ್ಮ ಆಟಿಕೆ ಮಾರಾಟ ಮಾಡಲು ಮೇಡ್ ಇನ್ ಇಂಡಿಯಾ ಆಟಿಕೆ ಅಂಗಡಿ ಅನುವು ಮಾಡಿಕೊಡಲಿದೆ. ಜೊತೆಗೆ ಭಾರತೀಯ ಸಂಸ್ಕೃತಿ, ಜಾನಪದ ಕಲೆಗಳು ಮತ್ತು ವೈಜ್ಞಾನಿಕ ಚಿಂತನೆಗಳನ್ನು ಉತ್ತೇಜಿಸಲಿದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.
ನಮ್ಮ ರಾಜ್ಯದ ಪಾರಂಪರಿಕ ಆಟಿಕೆಯಾದ ಚನ್ನಪಟ್ಟಣದ ಗೊಂಬೆ ಸೇರಿದಂತೆ ಸ್ಥಳೀಯ ಆಟಿಕೆಗಳನ್ನು ಮಾರಾಟ ಮಾಡಲು ಮೇಡ್ ಇನ್ ಇಂಡಿಯಾ ಆಂಗಡಿ ತೆರೆದಿರುವುದಕ್ಕೆ ಅಮೆಜಾನ್ ಇಂಡಿಯಾವನ್ನು ನಾನು ಶ್ಲಾಘಿಸುತ್ತೇನೆ. ಇಂತಹ ಪ್ರಯತ್ನಗಳು ಸ್ವದೇಶಿ ಉದಯೋನ್ಮುಖ ಬ್ರ್ಯಾಂಡ್‌ಗಳಿಗೆ ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ವ್ಯವಹಾರ ವೃದ್ಧಿಸಲು ಉತ್ತೇಜನ ನೀಡುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಸಾಂಪ್ರದಾಯಿಕ ಆಟಿಕೆಗಳಾದ ಚೌಕಾ ಬಾರಾ, ಪಿಟ್ಟು /ಲಾಗೋರಿ, ಲಟ್ಟು (ಮರದ ಆಟಿಕೆ) ಸೇರಿದಂತೆ ಹಲವು ಸ್ಥಳೀಯ ಅಟಿಕೆಗಳು ಮೇಡ್ ಇನ್ ಇಂಡಿಯಾ ಆಟಿಕೆ ಅಂಗಡಿಯಲ್ಲಿ ಇರಲಿವೆ. ಚನ್ನಪಟ್ಟಣ, ತಂಜಾವೂರು ಮತ್ತು ವಾರಣಾಸಿಯಂತಹ ವಿವಿಧ ಪ್ರದೇಶಗಳ ಕುಶಲಕರ್ಮಿಗಳು ತಯಾರಿಸಿದ ಆಟಿಕೆಗಳು ಮತ್ತು ಗೊಂಬೆಗಳು ಇಲ್ಲಿ ಲಭ್ಯವಿರುತ್ತವೆ.
ಜೊತೆಗೆ ಡಿಐವೈ ( ಡು ಇಟ್ ಯುವರ್ ಸೆಲ್ಫ್ ) ಮೈಕ್ರೋಸ್ಕೋಪ್, 4ಡಿ ಎಜುಕೇಷನಲ್ ಎಆರ್ (ಆಗ್ಮೆಂಟೆಡ್ ರಿಯಾಲಿಟಿ) ಆಟ, ವಿಜ್ಞಾನ ಪ್ರಯೋಗ ಕಿಟ್‌ಗಳು ಸೇರಿದಂತೆ ಶೈಕ್ಷಣಿಕ ಆಟಿಕೆಗಳೂ ಮೇಡ್ ಇನ್ ಇಂಡಿಯಾ ಅಂಗಡಿಯಲ್ಲಿ ಇರಲಿವೆ. ಕೆಲವು ವಿಶಿಷ್ಟವಾದ ಉತ್ಪನ್ನಗಳನ್ನು ಸ್ವದೇಶಿ ಬ್ರ್ಯಾಂಡ್‌ಗಳಾದ ಸ್ಮಾರ್ಟಿವಿಟಿ, ಶುಮಿ, ಸ್ಕಿಲ್‌ಮ್ಯಾಟಿಕ್ಸ್, ಶಿಫು, ಐನ್‌ಸ್ಟೈನ್ ಬಾಕ್ಸ್ ಇತ್ಯಾದಿಗಳು ಉತ್ಪಾದಿಸಲಿವೆ.
ಎಸ್‌ಎಂಬಿಗಳು, ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳು ತಯಾರಿಸಿದ ಸಾಂಪ್ರದಾಯಿಕ ಕಲೆಗಳು, ಕರಕುಶಲ ವಸ್ತುಗಳು ಮತ್ತು ಆಟಿಕೆಗಳಿಗೆ ಭಾರತ ನೆಲೆಯಾಗಿದೆ. ಈ ಹೊಸ ಮಳಿಗೆಯನ್ನು ಪ್ರಾರಂಭಿಸುವುದರೊಂದಿಗೆ ಇವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಮಾರಾಟಗಾರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಮನೀಶ್ ತಿವಾರಿ ಹೇಳಿದ್ದಾರೆ.