ಹೈದರಾಬಾದ್: ನೀವು ಹೊಂದಿರುವ ಯಾವುದೇ ವಸ್ತುವಿನ ಮಾಲೀಕತ್ವ ಸಾಬೀತುಪಡಿಸಬೇಕಾದರೆ ಅದಕ್ಕೆ ಸಂಬಂಧಿಸಿದ ಕಾನೂನುಬದ್ಧವಾಗಿ ಮಾನ್ಯವಾದ ಪುರಾವೆ ಅಗತ್ಯ. ಇದು ಆಸ್ತಿಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಎಲ್ಲ ರೀತಿಯ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಟೈಟಲ್ ಡೀಡ್ನಂಥ ಮೂಲ ಆಸ್ತಿ ದಾಖಲೆಗಳು ಬಹಳ ನಿರ್ಣಾಯಕವಾಗುತ್ತವೆ. ಅದು ಮನೆ ಅಥವಾ ಪ್ಲಾಟ್ ಅಥವಾ ಕೃಷಿ ಭೂಮಿಯಾಗಿರಲಿ, ಮಾರಾಟ ಅಥವಾ ಖರೀದಿಯ ಸಮಯದಲ್ಲಿ ನಿಮ್ಮ ಹೆಸರಿಗೆ ಯಾವುದೇ ಆಸ್ತಿಯನ್ನು ವರ್ಗಾಯಿಸಲು ಈ ದಾಖಲೆಗಳು ಬೇಕೇ ಬೇಕು. ಆದರೆ, ಒಂದು ವೇಳೆ ನಿಮ್ಮ ಯಾವುದೇ ಮೂಲ ಆಸ್ತಿ ಮಾಲೀಕತ್ವದ ದಾಖಲೆಗಳು ಕಳೆದುಹೋದಾಗ ಅಥವಾ ಕಳ್ಳತನವಾದಾಗ ಏನು ಮಾಡುವುದು? ದಾಖಲೆಗಳನ್ನು ಮತ್ತೆ ಪಡೆಯುವುದು ಹೇಗೆ? ಅದಕ್ಕಾಗಿ ಇಲ್ಲಿದೆ ಮಾರ್ಗ.
ಮೊದಲು ಎಫ್ಐಆರ್ ದಾಖಲಿಸಬೇಕು:ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಮೂಲ ದಾಖಲೆಗಳಿಲ್ಲದಿದ್ದರೆ ವಿವಾದಗಳು ಉದ್ಭವಿಸಬಹುದು. ಇಂಥ ಆಸ್ತಿಯ ಮೇಲೆ ನಿಮ್ಮ ಕಾನೂನು ಹಕ್ಕುಗಳನ್ನು ಸಾಬೀತುಪಡಿಸಲು ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ನೀವು ನಕಲಿ ಅಥವಾ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಬೇಕಾಗುತ್ತದೆ. ಆದರೆ, ಇದೊಂದು ಸುದೀರ್ಘ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ನೀವು ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಅಥವಾ NCR (ನಾನ್-ಕಾಗ್ನಿಜಬಲ್ ವರದಿ) ದಾಖಲಿಸಬೇಕು.
ದೂರು ದಾಖಲಿಸಿ ಎನ್ಟಿಸಿ ಪಡೆಯಬೇಕು:ಎಫ್ಐಆರ್ ದಾಖಲಾದ ನಂತರ, ಪೊಲೀಸರು ನಿಮ್ಮ ದಾಖಲೆಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಪೊಲೀಸರಿಗೆ ದಾಖಲೆಗಳನ್ನು ಹುಡುಕಲಾಗದಿದ್ದರೆ ಅವರು ಎನ್ಟಿಸಿ ಅಥವಾ ಪತ್ತೆಹಚ್ಚಲಾಗದ ಪ್ರಮಾಣಪತ್ರವನ್ನು (NTC) ನೀಡುತ್ತಾರೆ. ದಾಖಲೆ ಕಳೆದುಹೋಗಿದೆ ಅಥವಾ ನಷ್ಟವಾಗಿದೆ ಎಂಬುದನ್ನು ಸಾಬೀತುಪಡಿಸಲು ಮತ್ತು ಆ ಮೂಲಕ ನಕಲು ದಾಖಲೆ ಪಡೆಯಲು ಎನ್ಟಿಸಿ ಅತ್ಯಂತ ಅವಶ್ಯಕವಾದ ದಾಖಲೆಯಾಗಿದೆ. ಇದು ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ. ದೇಶದಲ್ಲಿ ಎಲ್ಲಿಯಾದರೂ ನೀವು ವಾಸಿಸುವ ಸ್ಥಳಕ್ಕೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬಹುದು.
ಕನಿಷ್ಠ ಎರಡು ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಬೇಕು:ಎಫ್‌ಐಆರ್ ದಾಖಲಾದ ನಂತರ, ಕನಿಷ್ಠ ಎರಡು ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸಬೇಕು. ಒಂದು ಇಂಗ್ಲಿಷ್‌ನಲ್ಲಿ ಮತ್ತು ಇನ್ನೊಂದು ಸ್ಥಳೀಯ ಭಾಷೆಯಲ್ಲಿ. ಆಸ್ತಿಯ ವಿವರಗಳು, ಕಳೆದುಹೋದ ದಾಖಲೆಗಳು ಮತ್ತು ನಿಮ್ಮ ಸಂಪರ್ಕ ವಿವರಗಳನ್ನು ಈ ನೋಟಿಸ್ನಲ್ಲಿ ನಮೂದಿಸಬೇಕು. ಯಾರೇ ಸಾರ್ವಜನಿಕರು ನೋಟಿಸ್‌ಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅವರು ಪ್ರಕಟಣೆಯ ದಿನಾಂಕದಿಂದ 15 ದಿನಗಳಲ್ಲಿ ಅದನ್ನು ತಿಳಿಸಬಹುದು. ಈ ನೋಟಿಸ್ ನೀಡಲು ವಕೀಲರ ಪತ್ರದೊಂದಿಗೆ ಸಾಕಷ್ಟು ಕಾರಣಗಳನ್ನು ವಿವರಿಸುವ ನೋಟರೈಸ್ಡ್ ಅಫಿಡವಿಟ್‌ಗಳನ್ನು ಒದಗಿಸಬೇಕು.