ಕರ್ನಾಟಕ

karnataka

ETV Bharat / business

UPI ಮೂಲಕವೇ ಸಿಗಲಿದೆ ಸಾಲ: ಬ್ಯಾಂಕ್​ಗಳಿಗೆ RBI ಅನುಮತಿ - ಸಾಲಗಳನ್ನು ನೀಡಲು ಆರ್​ಬಿಐ ಬ್ಯಾಂಕುಗಳಿಗೆ ಅನುಮತಿ

ಫೋನ್​ಪೇ, ಗೂಗಲ್ ಪೇ ಮುಂತಾದ ಯುಪಿಐ ಆ್ಯಪ್​ಗಳೇ ಗ್ರಾಹಕರಿಗೆ ಕಿರು ಸಾಲ ಸೌಲಭ್ಯ ನೀಡುವ ಕಾಲ ದೂರವಿಲ್ಲ.

RBI allows banks to offer pre-approved credit on UPI
RBI allows banks to offer pre-approved credit on UPI

By

Published : Apr 7, 2023, 3:55 PM IST

ಮುಂಬೈ: ಇನ್ನು ಮುಂದೆ ನೀವು ಮೊಬೈಲ್​ನಲ್ಲಿ ಬಳಸುವ ಯುಪಿಐ ಆ್ಯಪ್​ಗಳೇ ನಿಮಗೆ ಸಾಲ ನೀಡಲಿವೆ. ಯುಪಿಐ ನೆಟ್‌ವರ್ಕ್ ಮೂಲಕ ಗ್ರಾಹಕರಿಗೆ ಪೂರ್ವ ಮಂಜೂರಾದ (pre-approved) ಸಾಲಗಳನ್ನು ನೀಡಲು ಆರ್​ಬಿಐ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ದೇಶದಲ್ಲಿ ಗ್ರಾಹಕ ಸಾಲ ಮಾರುಕಟ್ಟೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಆರ್​ಬಿಐ ಈ ಕ್ರಮ ತೆಗೆದುಕೊಂಡಿದೆ. ಇದರಿಂದ ಯುಪಿಐ ಬಳಸುತ್ತಿರುವ 30 ಕೋಟಿ ಗ್ರಾಹಕರಿಗೆ ಸಣ್ಣ ಸಾಲ ಸೌಲಭ್ಯ ನೀಡಲು ಅನುಕೂಲವಾಗಲಿದೆ. ಇದು ಒಂದು ರೀತಿಯಲ್ಲಿ ಕ್ರೆಡಿಟ್ ಕಾರ್ಡ್​ ರೀತಿಯಲ್ಲೇ ಕೆಲಸ ಮಾಡಲಿದೆ.

ಆರ್‌ಬಿಐ ಈಗಾಗಲೇ ತನ್ನ ಗ್ರಾಹಕರಿಗೆ ಓವರ್‌ಡ್ರಾಫ್ಟ್‌ಗಳನ್ನು ಒದಗಿಸಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಇದನ್ನು ಯುಪಿಐ ಮೂಲಕ ಗ್ರಾಹಕರಿಗೆ ವರ್ಗಾಯಿಸಬಹುದಾಗಿದೆ. ಕ್ರೆಡಿಟ್ ಲೈನ್‌ನಿಂದ ಗ್ರಾಹಕರಿಗೆ ಹಣ ವರ್ಗಾಯಿಸಲು ಈಗ ಬ್ಯಾಂಕ್​ಗಳಿಗೆ ಅನುಮತಿ ಸಿಕ್ಕಿರುವುದರಿಂದ ಅವು ಈಗ ಕ್ರೆಡಿಟ್ ಕಾರ್ಡ್​ ಮಾದರಿಯಲ್ಲೇ ಸಾಲ ನೀಡಬಹುದು. ಆರ್​ಬಿಐ ಕ್ರಮವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಯುಪಿಐ ಭಾರತದಲ್ಲಿ 75 ರಷ್ಟು ಚಿಲ್ಲರೆ ಡಿಜಿಟಲ್ ಪಾವತಿಗಳನ್ನು ನಿರ್ವಹಿಸುವ ದೃಢವಾದ ವೇದಿಕೆಯಾಗಿದೆ ಎಂದು ಹೇಳಿದರು.

ಈಗಾಗಲೇ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐಗೆ ಲಿಂಕ್ ಮಾಡಲು ಅನುಮತಿ ನೀಡಲಾಗಿದೆ. ಪ್ರಸ್ತುತ ಯುಪಿಐ ವಹಿವಾಟುಗಳನ್ನು ಬ್ಯಾಂಕ್‌ ಖಾತೆಗಳ ಜೊತೆಗೆ ಜೋಡಿಸಲಾಗಿದೆ. ಕೆಲವೊಮ್ಮೆ ವ್ಯಾಲೆಟ್‌ಗಳು ಸೇರಿದಂತೆ ಪ್ರಿಪೇಯ್ಡ್ ಸಾಧನಗಳಿಂದ ಕೂಡ ಇವನ್ನು ನಿರ್ವಹಿಸಲಾಗುತ್ತದೆ. ಬ್ಯಾಂಕ್‌ಗಳಲ್ಲಿ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳಿಗೆ ವರ್ಗಾವಣೆಯನ್ನು ಸಕ್ರಿಯಗೊಳಿಸುವ ಮೂಲಕ ಯುಪಿಐ ವ್ಯಾಪ್ತಿಯನ್ನು ವಿಸ್ತರಿಸಲು ಈಗ ಪ್ರಸ್ತಾಪಿಸಲಾಗಿದೆ ಎಂದು ದಾಸ್ ಹೇಳಿದರು.

30 ದಿನಗಳವರೆಗೆ ಬಡ್ಡಿರಹಿತ ಕ್ರೆಡಿಟ್ ಮತ್ತು ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ಒದಗಿಸುವ ಮೂಲಕ ಕ್ರೆಡಿಟ್ ಕಾರ್ಡ್‌ನಂತೆಯೇ ಅಲ್ಪಾವಧಿಯ ಸಾಲಗಳನ್ನು ನೀಡಲು ಹೊಸ ನಿಯಮಗಳು ಬ್ಯಾಂಕ್‌ಗಳಿಗೆ ಅವಕಾಶ ನೀಡುತ್ತವೆಯೇ ಎಂಬುದರ ಮೇಲೆ ಹೊಸ ಉತ್ಪನ್ನದ ಯಶಸ್ಸು ಅವಲಂಬಿತವಾಗಿರುತ್ತದೆ ಎಂದು ಬ್ಯಾಂಕರ್‌ಗಳು ಹೇಳಿದ್ದಾರೆ. ಆದಾಗ್ಯೂ ವ್ಯಾಪಾರಿಗಳಿಗೆ ಶುಲ್ಕ ವಿಧಿಸುವುದರ ಮೂಲಕ ಕ್ರೆಡಿಟ್ ಕಾರ್ಡ್‌ಗಳು ಈ ವೈಶಿಷ್ಟ್ಯಗಳನ್ನು ಒದಗಿಸಬಹುದು. ಕ್ರೆಡಿಟ್ ಕಾರ್ಡ್‌ಗಳಿಗೆ ಹೋಲಿಸಿದರೆ ಯುಪಿಐ ಪ್ರಯೋಜನ ಏನೆಂದರೆ, ಬ್ಯಾಂಕ್‌ಗಳು ಹೊಸ ಬಳಕೆದಾರರನ್ನು ಸೈನ್ ಅಪ್ ಮಾಡಬೇಕಾಗಿಲ್ಲ, ಏಕೆಂದರೆ ಅವು ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಗ್ರಾಹಕರಿಗೆ ಸಾಲ ನೀಡಲಿವೆ. ಇನ್ನು ಕಾರ್ಡ್‌ಗಳನ್ನು ನೀಡಲು, ವ್ಯಾಪಾರಿಗಳನ್ನು ಸೈನ್ ಅಪ್ ಮಾಡಿಕೊಳ್ಳಲು ಅಥವಾ ಸ್ವೈಪ್ ಯಂತ್ರಗಳನ್ನು ನಿಯೋಜಿಸಲು ಬ್ಯಾಂಕ್‌ಗಳು ಖರ್ಚು ಮಾಡಬೇಕಾಗಿಲ್ಲ.

ಯುಪಿಐ ವಲಯದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲದ ಎಚ್​ಡಿಎಫ್​ಸಿ ಬ್ಯಾಂಕ್ ಹಾಗೂ ಇಂಥ ಇನ್ನಿತರ ಬ್ಯಾಂಕ್​ಗಳು ಈಗ ಯುಪಿಐ ಮೂಲಕ ಸಾಲಗಳನ್ನು ನೀಡಲು ಮುಂದಾಗಬಹುದು. ಯುಪಿಐ ಮೂಲಕ ಪೂರ್ವ ಮಂಜೂರಾದ ಸಾಲಗಳನ್ನು ನೀಡುವುದು ಮಹತ್ವದ ಹೆಜ್ಜೆಯಾಗಿದೆ ಹಾಗೂ ಈ ವಲಯದಲ್ಲಿ ಇದು ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಲಿದೆ ಎಂದು ಇಂಡಿಯನ್ ಬ್ಯಾಂಕ್ ಎಂಡಿ ಮತ್ತು ಸಿಇಒ ಎಸ್ ಎಲ್ ಜೈನ್ ಹೇಳಿದ್ದಾರೆ.

ಇದನ್ನೂ ಓದಿ : ಇನ್ಮುಂದೆ ಲೋನ್ ಆ್ಯಪ್​ಗಳು ಕಾಂಟ್ಯಾಕ್ಟ್​ ಡಿಟೇಲ್ಸ್​, ಕಾಲ್ ಲಾಗ್ಸ್​ ಪಡೆಯುವಂತಿಲ್ಲ: ಗೂಗಲ್ ಹೊಸ ನಿಯಮ

ABOUT THE AUTHOR

...view details