ನಿಮ್ಮ ಪಾನ್ ಸಂಖ್ಯೆಗೆ(ಶಾಶ್ವತ ಖಾತೆ ಸಂಖ್ಯೆ) ಆಧಾರ್ ಲಿಂಕ್ ಮಾಡಿಕೊಂಡಿದ್ದೀರಾ ಎಂಬುದನ್ನು ಪರಿಶೀಲಿಸಿಕೊಳ್ಳಿ. ಇಲ್ಲವಾದಲ್ಲಿ ಇವತ್ತೇ ಲಿಂಕ್ ಮಾಡಿಕೊಳ್ಳಿ. ಒಂದು ವೇಳೆ ಇದನ್ನು ತಪ್ಪಿದಲ್ಲಿ 500 ರಿಂದ 1000 ರೂಪಾಯಿ ದಂಡ ತೆರಬೇಕು ಅಥವಾ ನಿಮ್ಮ ಪಾನ್ ಸಂಖ್ಯೆಯೇ ನಿಷ್ಕ್ರಿಯವಾಗಲಿವೆ ಎಚ್ಚರ.
ಕೇಂದ್ರೀಯ ನೇರ ತೆರಿಗೆ ಮಂಡಳಿಯು ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವು ನಾಳೆಗೆ (ಮಾ.31) ಮುಗಿಯಲಿದೆ. ಗಡುವು ತೀರಿದ ಬಳಿಕ ನೀವೇನಾದರು ಲಿಂಕ್ ಮಾಡ ಬಯಸಿದಲ್ಲಿ ಅದಕ್ಕೆ ದಂಡವಾಗಿ 500 ರೂಪಾಯಿ ತೆರಬೇಕಾಗುತ್ತದೆ. ಅದೂ 3 ತಿಂಗಳ (ಜೂನ್ 30 ರೊಳಗೆ) ಮಿತಿಯೊಳಗೆ. ಆ ಮಿತಿಯನ್ನೂ ದಾಟಿದಲ್ಲಿ 1000 ರೂಪಾಯಿ ದಂಡ ಪಾವತಿಸಬೇಕು ಎಂದು ಮಂಡಳಿ ತಿಳಿಸಿದೆ.
ಬ್ಯಾಂಕಿಂಗ್ ಸೇವೆಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಆನ್‌ಲೈನ್ ಪಾವತಿಗಳು, ಯುಪಿಐ, ಮೊಬೈಲ್ ಬ್ಯಾಂಕಿಂಗ್ ಇತ್ಯಾದಿಗಳು ಯಾವುದೇ ತೊಂದರೆಯಿಲ್ಲದೆ ಸೇವೆ ನಿರಂತರವಾಗಿರಬೇಕಾದರೆ ಪಾನ್ ಕಾರ್ಡ್ಗೆ ಆಧಾರ್ ಲಿಂಗ್ ಅಗತ್ಯವಾಗಿದೆ. ಇಲ್ಲದಿದ್ದರೆ ಈ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಪಾನ್ಗೆ ಆಧಾರ್ ಸಂಯೋಜನೆ ಮಾಡುವ ವಿಧಾನ:
1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಓಪನ್ ಮಾಡಿ.
2. ಮೊದಲ ಬಾರಿಗೆ ಲಾಗಿನ್ ಮಾಡುವ ಬಳಕೆದಾರರು ನೋಂದಾಯಿಸಿಕೊಳ್ಳಬೇಕು. ನಿಮ್ಮ ಬಳಕೆದಾರ ಐಡಿ, ಪಾಸ್ವರ್ಡ್, ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಬೇಕು.
3. ಬಳಿಕ ಪರದೆಯ ಮೇಲೆ ಆಧಾರ್- ಪಾನ್ ಲಿಂಕ್‌ಗಾಗಿ ವಿಂಡೋವೊಂದು ತೆರೆದುಕೊಳ್ಳುತ್ತದೆ.
4. ಅದರಲ್ಲಿ ಪಾನ್ ಕಾರ್ಡ್‌ನಲ್ಲಿರುವ ವಿವರಗಳಂತೆ ಹೆಸರು ಮತ್ತು ಜನ್ಮ ದಿನಾಂಕದ ಮಾಹಿತಿ ಕಾಣಿಸಿಕೊಳ್ಳುತ್ತದೆ.
5. ಪರದೆಯ ಮೇಲೆ ಕಾಣುವ ಪಾನ್ ಕಾರ್ಡ್ ವಿವರಗಳನ್ನು ಆಧಾರ್ನಲ್ಲಿ ನಮೂದಿಸಿದ ಮಾಹಿತಿಯನ್ನು ಪರಿಶೀಲಿಸಬೇಕು. ವಿವರಗಳಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸಿ.
6. ವಿವರಗಳನ್ನು ಹೊಂದಾಣಿಕೆ ಮಾಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು "ಲಿಂಕ್ ನೌ" ಬಟನ್ ಕ್ಲಿಕ್ ಮಾಡಿ.