ನವದೆಹಲಿ :ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ 17 ಮೇ 2022 ರಂದು ದೇಶದ ಅತಿದೊಡ್ಡ ಐಪಿಓ ಅನ್ನು ಹೊರತಂದಿತ್ತು. ಇದು 17 ಮೇ 2023 ರಂದು ಲಿಸ್ಟಿಂಗ್ ಆಗಿದ್ದು, ಈಗ ಒಂದು ವರ್ಷ ಪೂರ್ಣಗೊಂಡಿದೆ. ಆಗ ಎಲ್ಐಸಿ ತನ್ನ ಷೇರುಗಳನ್ನು ಪ್ರತಿಷೇರಿಗೆ ರೂ 949 ದರದಲ್ಲಿ ಇಶ್ಯು ಮಾಡಿತ್ತು. ಆದರೆ ಈ ಷೇರುಗಳ ಲಿಸ್ಟಿಂಗ್ ಶೇಕಡಾ 9 ರಷ್ಟು ಕುಸಿತದೊಂದಿಗೆ 867.20 ರೂ. ಯಲ್ಲಿ ಆರಂಭವಾಗಿತ್ತು. ಆದರೆ ಈಗ ಒಂದು ವರ್ಷದ ನಂತರ ಹೂಡಿಕೆ ಮಾಡಿದ ಜನರಿಗೆ ಬಹು ದೊಡ್ಡ ಹೊಡೆತ ಬಿದ್ದಿದೆ. ಹೂಡಿಕೆದಾರರು 2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಎಲ್ಐಸಿ ಷೇರುಗಳ ಕಾರಣದಿಂದ ಕಳೆದುಕೊಂಡಿದ್ದಾರೆ.
ಎಲ್ಐಸಿ ಐಪಿಓ ಭಾರತೀಯ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಓ ಎಂದು ವರ್ಣಿಸಲಾಗಿತ್ತು. ಇದರ ಮೂಲಕ ಸಾಕಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಆಸೆಯಿಂದ ಚಿಕ್ಕ ಹಾಗೂ ದೊಡ್ಡ ಹೂಡಿಕೆದಾರರು ಇದರಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದ್ದರು. ಆದರೆ ಲಾಭ ಬರುವುದು ಹಾಗಿರಲಿ, ಹಾಕಿದ ಬಂಡವಾಳವೂ ಈಗ ವಾಪಸ್ ಬರುತ್ತಿಲ್ಲ. ಇನ್ನಷ್ಟು ನಷ್ಟ ಆಗುವುದು ಬೇಡವೆಂದು ಕೆಲ ಹೂಡಿಕೆದಾರರು ಸಿಕ್ಕ ಬೆಲೆಗೆ ತಮ್ಮ ಷೇರುಗಳನ್ನು ಮಾರಿದ್ದಾರೆ. ಆದರೆ ಇನ್ನೂ ಕೆಲವರು ಇಂದಲ್ಲ ನಾಳೆ ಷೇರು ಬೆಲೆ ಹೆಚ್ಚಾಗಬಹುದು ಎಂದು ಕಾದು ಕುಳಿತಿದ್ದಾರೆ. ಈಗ ಆ ಹೂಡಿಕೆದಾರರು ಒಂದು ವರ್ಷದ ನಂತರ ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಎಲ್‌ಐಸಿ ಷೇರುಗಳು ಶೇ 40ರಷ್ಟು ಕುಸಿತ ಕಂಡಿವೆ. ಇದರಿಂದ ಹೂಡಿಕೆದಾರರು 2.40 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.