ಬೆಂಗಳೂರು: ಭಾರತದ ಸ್ಟಾರ್ಟಪ್ ವಲಯದಲ್ಲಿ ಉದ್ಯೋಗ ಕಡಿತದ ಪರ್ವ ಇನ್ನೂ ಮುಂದುವರಿಯುತ್ತಿದೆ. ಒಟ್ಟು 84 ಭಾರತೀಯ ಸ್ಟಾರ್ಟಪ್ಗಳಲ್ಲಿನ 24,250 ಉದ್ಯೋಗಿಗಳು ಈವರೆಗೆ ಕೆಲಸ ಕಳೆದುಕೊಂಡಿದ್ದಾರೆ. ಪ್ರಮುಖ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಪ್ರಾಕ್ಟೊ, ಕಂಪನಿಯ ನಿರಂತರ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಯೋಜನಾ ಪ್ರಕ್ರಿಯೆಯ ಭಾಗವಾಗಿ 41 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಲ್ಲಿ ಹೆಚ್ಚಾಗಿ ಇಂಜಿನಿಯರ್‌ಗಳು ಸೇರಿದ್ದಾರೆ. ದೇಶದ ಸ್ಥಳೀಯ ಕ್ವಿಕ್ - ಗ್ರೋಸರಿ ಡೆಲಿವರಿ ಪ್ರೊವೈಡರ್ ಆಗಿರುವ ಡಂಜೊ ತನ್ನ ಉದ್ಯೋಗಿಗಳ ಕನಿಷ್ಠ ಶೇಕಡಾ 30 ರಷ್ಟು ಅಂದರೆ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಡಂಜೊ ಮತ್ತೊಂದು ಸುತ್ತಿನ ನಿಧಿ ಸಂಗ್ರಹಣೆಯಲ್ಲಿ 75 ಮಿಲಿಯನ್ ಡಾಲರ್ ಬಂಡವಾಳ ಕ್ರೋಢೀಕರಿಸಿರುವುದು ಗಮನಾರ್ಹ.
ವರದಿಗಳ ಪ್ರಕಾರ, ಬೆಂಗಳೂರು ಮೂಲದ ಜೆಸ್ಟ್‌ಮನಿ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದು ಸುಮಾರು 100 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಹೋಮ್‌ಗ್ರೋನ್ ಫ್ಯಾಂಟಸಿ ಇ-ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಫ್ಯಾನ್‌ಕ್ಲಾಶ್ ತನ್ನ ಉದ್ಯೋಗಿಗಳ ಪೈಕಿ ಸುಮಾರು 75 ಪ್ರತಿಶತದಷ್ಟು ಜನರನ್ನು ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ. ಫ್ಯಾನ್ ಕ್ಲ್ಯಾಶ್ ಮೂರು ಹಂತಗಳಲ್ಲಿ 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾಗೊಂಡ ಉದ್ಯೋಗಿಗಳಿಗೆ ಕಂಪನಿ ಎರಡು ತಿಂಗಳ ಸಂಬಳವನ್ನು ಪರಿಹಾರವಾಗಿ ನೀಡಿದೆ. ನಾವು ಎದುರಿಸುತ್ತಿರುವ ಪ್ರಸ್ತುತ ಪರಿಸ್ಥಿತಿಗಳಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ತಂಡದ ಗಾತ್ರವನ್ನು 12 ಪ್ರತಿಶತ ಅಥವಾ 350 ಕ್ಕೂ ಹೆಚ್ಚು ಉದ್ಯೋಗಿಗಳಿಂದ ಕಡಿಮೆಗೊಳಿಸುವುದಾಗಿ ಘೋಷಿಸಿದರು ಅನಾಕಾಡೆಮಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಗೌರವ್ ಮುಂಜಾಲ್ ಕಳೆದ ತಿಂಗಳ ಕೊನೆಯಲ್ಲಿ ಘೋಷಿಸಿದ್ದರು.
ಯಾವ ಯಾವ ಸ್ಟಾರ್ಟ್ಅಪ್ಗಳಲ್ಲಿ ಉದ್ಯೋಗ ಕಡಿತ:ಬೈಜುಸ್, ಓಲಾ, ಓಯೊ, ಮೀಶೊ, ಎಂಪಿಎಲ್, ಲಿವ್ ಸ್ಪೇಸ್, ಇನ್ನೋವಾಕರ್, ಅನಾಕಾಡೆಮಿ ಮತ್ತು ವೇದಾಂತು ಸೇರಿದಂತೆ ಹಲವಾರು ಸ್ಟಾರ್ಟಪ್ಗಳು ಉದ್ಯೋಗ ಕಡಿತ ಮಾಡಿವೆ. ಹೋಮ್ ಇಂಟೀರಿಯರ್ಸ್ ಮತ್ತು ರಿನೋವೇಶನ್ ಪ್ಲಾಟ್‌ಫಾರ್ಮ್ ಲಿವ್ ಸ್ಪೇಸ್ ಇತ್ತೀಚೆಗೆ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಕನಿಷ್ಠ 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆನ್‌ಲೈನ್ ಸ್ಟೋರ್‌ಗಳಾದ ದುಕಾನ್ SaaS ಪ್ಲಾಟ್‌ಫಾರ್ಮ್, ಸುಮಾರು 30 ಪ್ರತಿಶತದಷ್ಟು ಉದ್ಯೋಗಿಗಳನ್ನು ಅಥವಾ ಸುಮಾರು 60 ಉದ್ಯೋಗಿಗಳನ್ನು ವಜಾಗೊಳಿಸಿದೆ.