ನವದೆಹಲಿ: ಐಟಿ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕವನ್ನು ಜುಲೈ 31ರ ನಂತರ ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸುವ ಸಾಧ್ಯತೆ ಇಲ್ಲದಿರುವುದರಿಂದ ಆದಾಯ ತೆರಿಗೆ ಪಾವತಿದಾರರು ಆದಷ್ಟು ಬೇಗನೆ ಐಟಿಆರ್ ಫೈಲಿಂಗ್ ಮುಗಿಸಿಕೊಳ್ಳುವುದು ಸೂಕ್ತ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಫೈಲಿಂಗ್ ಆಗಬಹುದು ಎಂದು ಅವರು ತಿಳಿಸಿದರು.
2022-23ರ ಮೌಲ್ಯಮಾಪನ ವರ್ಷಕ್ಕೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾದ ಕಳೆದ ವರ್ಷದ ಜುಲೈ 31 ರವರೆಗೆ ಸುಮಾರು 5.83 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಹೆಚ್ಚು ವೇಗವಾಗಿರುವುದರಿಂದ ನಾವು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಫೈಲಿಂಗ್ ಮಾಡಲು ಕೊನೆಯ ಕ್ಷಣದವರೆಗೆ ಕಾಯಬೇಡಿ ಮತ್ತು ಯಾವುದೇ ಅವಧಿ ವಿಸ್ತರಣೆಯಾಗಬಹುದು ಎಂದು ನಿರೀಕ್ಷಿಸಬೇಡಿ ಎಂದು ನಾವು ಅವರಿಗೆ ಸಲಹೆ ನೀಡುತ್ತೇವೆ ಎಂದು ಮಲ್ಹೋತ್ರಾ ಹೇಳಿದರು.
ತೆರಿಗೆ ಕ್ರೋಢೀಕರಣ ಗುರಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಹೆಚ್ಚು ಕಡಿಮೆ ಗುರಿ ಬೆಳವಣಿಗೆ ದರಕ್ಕೆ ಅನುಗುಣವಾಗಿದೆ ಎಂದರು. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೆಳವಣಿಗೆ ದರ ಇಲ್ಲಿಯವರೆಗೆ ಶೇ 12 ರಷ್ಟಿದೆ. ಆದಾಗ್ಯೂ, ದರ ಕಡಿತದ ಕಾರಣದಿಂದಾಗಿ ಅಬಕಾರಿ ಸುಂಕದ ವಿಷಯದಲ್ಲಿ ಬೆಳವಣಿಗೆ ದರವು ಶೇಕಡಾ 12 ಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು.