ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ವಿಭಜನೆಗೊಂಡ, ಹಣಕಾಸು ಸಾಲ ನೀಡುವ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಮತ್ತು ವಿಶ್ವದ ಅತಿದೊಡ್ಡ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಬ್ಲ್ಯಾಕ್‌ರಾಕ್ ಎರಡೂ ಒಟ್ಟಾಗಿ ಸೇರಿ 300 ಮಿಲಿಯನ್ ಡಾಲರ್ ಸಂಯೋಜಿತ ಹೂಡಿಕೆಯೊಂದಿಗೆ ಹೊಸ ಅಸೆಟ್ ಮ್ಯಾನೇಜಮೆಂಟ್ ಕಂಪನಿ ಅಥವಾ ಮ್ಯೂಚುವಲ್ ಫಂಡ್ ಕಂಪನಿ ಜಿಯೋ ಬ್ಲ್ಯಾಕ್‌ರಾಕ್ ಅನ್ನು ಆರಂಭಿಸಿವೆ.
ಭಾರತದಲ್ಲಿ ಲಕ್ಷಾಂತರ ಹೂಡಿಕೆದಾರರಿಗೆ ತಂತ್ರಜ್ಞಾನ ಆಧರಿತ ಕೈಗೆಟುಕುವ, ನವೀನ ಹೂಡಿಕೆ ವಿಧಾನಗಳನ್ನು ಜಿಯೋ ಬ್ಲ್ಯಾಕ್‌ರಾಕ್ ನೀಡಲಿದೆ ಎಂದು ಬ್ಲ್ಯಾಕ್‌ರಾಕ್ ಮತ್ತು ಜಿಯೋ ಫೈನಾನ್ಷಿಯಲ್ನ ಜಂಟಿ ಉದ್ಯಮವಾಗಿರುವ ಜಿಯೋ ಬ್ಲ್ಯಾಕ್‌ರಾಕ್‌ನ ಹೇಳಿಕೆ ತಿಳಿಸಿದೆ.
ಇಬ್ಬರೂ ಪಾಲುದಾರರು ಜಂಟಿ ಉದ್ಯಮದಲ್ಲಿ ತಲಾ 150 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದ್ದಾರೆ. ಇದು ಪ್ರಸ್ತುತ ಎಸ್‌ಬಿಐ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್ ಮತ್ತು ಎಚ್‌ಡಿಎಫ್‌ಸಿ ಮ್ಯೂಚುಯಲ್ ಫಂಡ್‌ನಿಂದ ಪ್ರಾಬಲ್ಯ ಹೊಂದಿರುವ 44.39 ಟ್ರಿಲಿಯನ್ ಭಾರತೀಯ ಮ್ಯೂಚುಯಲ್ ಫಂಡ್ ಉದ್ಯಮದಲ್ಲಿನ 44 ನೇ ಕಂಪನಿಯಾಗಲಿದೆ.
ಇದು ಭಾರತೀಯ ಮ್ಯೂಚುವಲ್ ಫಂಡ್ ಮಾರುಕಟ್ಟೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು. ಜಿಯೋದ ತಾಂತ್ರಿಕ ಜ್ಞಾನ ಮತ್ತು ಬೃಹತ್ ಗ್ರಾಹಕರ ಸಂಖ್ಯೆಯ ಜೊತೆಗೆ ಬ್ಲ್ಯಾಕ್‌ರಾಕ್‌ನ ಫಂಡ್ ಹೌಸ್ ಆಗಿ ಸಾಬೀತಾಗಿರುವ ಜಾಗತಿಕ ಪ್ರತಿಷ್ಠೆಯು ಉದ್ಯಮದ ಕ್ರಿಯಾತ್ಮಕತೆಯನ್ನು ಬದಲಾಯಿಸಬಹುದು. ಜಂಟಿ ಉದ್ಯಮ ಕಾರ್ಯಾರಂಭ ಮಾಡಲು 12 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.